2027ಕ್ಕೆ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಯೋಜನೆ ಪೂರ್ಣ

0
28

ಬಾಗಲಕೋಟೆ: ಬಾಗಲಕೋಟೆ-ಕುಡಚಿ ರೈಲು ಮಾರ್ಗ ಯೋಜನೆಯನ್ನು ೨೦೨೭ರ ಹೊತ್ತಿಗೆ ಪೂರ್ಣಗೊಳಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಮಂಗಳವಾರ ವಿಶೇಷ ರೈಲಿನಲ್ಲಿ ಕುಡಚಿ ರೈಲು ಮಾರ್ಗದ ಬಾಗಲಕೋಟೆಯಿಂದ ಖಜ್ಜಿಡೋಣಿವರೆಗಿನ ಮಾರ್ಗದ ಸಂಚಾರವನ್ನು ವಿಶೇಷ ರೈಲಿನಲ್ಲಿ ವೀಕ್ಷಿಸಿದ ಅವರು ಅಧಿಕಾರಿಗಳಿಂದ ಯೋಜನೆ ಬಗ್ಗೆ ಮಾಹಿತಿ ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೦೧೦-೧೧ರಲ್ಲಿ ೧೬೫೦ ಕೋಟಿ ರೂ.ಗಳೊಂದಿಗೆ ಯೋಜನೆ ಆರಂಭಗೊAಡಿದೆ. ಈ ಭಾಗದಲ್ಲಿ ರೈಲು ಯೋಜನೆಗಳು ನಡೆಯುತ್ತಿರುವುದು ಹೊಸ ಮನ್ವಂತರವನ್ನು ಬರೆಯಲಿದೆ. ಬ್ರಿಟಿಷರ ಅವಧಿ ನಂತರ ಈ ಭಾಗದಲ್ಲಿ ರೈಲ್ವೆ ಯೋಜನೆಗಳಿಗೆ ಅವಕಾಶವೇ ಇರಲಿಲ್ಲ ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಕಲ್ಯಾಣ ಹಾಗೂ ಕಿತ್ತೂರ ಕರ್ನಾಟಕದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ ಎಂದರು.

ಮಾರ್ಚ್‌ನಿಂದ ಲೋಕಾಪುರ ಸಂಚಾರ:
ಖಜ್ಜಿಡೋಣಿಯಿಂದ ಲೋಕಾಪುರದವರೆಗೆ ೭ ಕಿ.ಮೀ. ಕಾಮಗಾರಿ ಮುಕ್ತಾಯಗೊಂಡಿದೆ. ರೈಲು ಮಾರ್ಗ ಸುರಕ್ಷತಾ ಪರಿಶೀಲನೆ ಕಾರ್ಯಾರಂಭಗೊಳ್ಳಲಿದ್ದು, ಮಾರ್ಚ್‌ತಿಂಗಳಿನಿಂದ ಗೂಡ್ಸ್ ಹಾಗೂ ಪ್ಯಾಸೆಂಜರ್ ವಾಹನಗಳ ಸಂಚಾರ ಆರಂಭವಾಗಲಿದೆ ಎಂದರು. ಈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಸಂಚಾರ ಆರಂಭದ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಸಂಚಾರ ನಡೆಸುವ ಬಗ್ಗೆ ಚರ್ಚಿಸಲಾಗಿದ್ದು, ಮಾರ್ಚ್ ವೇಳೆಗೆ ಆರಂಭವಾಗಲಿದೆ ಎಂದರು.
ಬಾಗಲಕೋಟೆ ಕುಡಚಿ ಮಾರ್ಗಕ್ಕಾಗಿ ೨೦೨೪-೨೦೨೫ ಅವಧಿಯಲ್ಲಿ ೧೫೦ ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಲೋಕಾಪುರದಿಂದ ಯಾದವಾಡವರೆಗೆ ೨೭ ಕಿ.ಮೀ. ಕಾಮಗಾರಿಯನ್ನೂ ಬರುವ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳಿಸಲಾಗುತ್ತದೆ. ಇಡೀ ಮಾರ್ಗದ ಶೇ.೩೦ ರಿಂದ ಶೇ.೩೫ ಕಾಮಗಾರಿ ಪೂರ್ಣಗೊಂಡಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಶೇ.೫೦ ಸಹಭಾಗಿತ್ವದಲ್ಲಿ ಯೋಜನೆಕೈಗೊಳ್ಳಲಾಗಿದೆ. ಇನ್ನು ಕಾಮಗಾರಿಗೆ ವೇಗ ದೊರಕಲಿದೆ ಎಂದರು.
ಗದಗ-ಯಲವಿಗಿ ಮಾರ್ಗದ ರೈಲ್ವೆ ಯೋಜನೆಗಾಗಿ ಡಿಪಿಆರ್ ಸಿದ್ಧಗೊಳ್ಳುತ್ತಿದ್ದು, ಅದಕ್ಕೂ ೧೦೦ ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಒಟ್ಟು ೧೧ ರೈಲ್ವೆ ಯೋಜನೆಗಳಿಗಾಗಿ ಕೇಂದ್ರ ಸರ್ಕಾರ ೨೯ ಸಾವಿರ ಕೋಟಿ ರೂ.ಗಳನ್ನು ವಿನಿಯೋಗ ಮಾಡಿದ್ದು, ಯೋಜನೆ ಪೂರ್ಣಗೊಂಡ ನಂತರ ಹೊಸ ಮನ್ವಂತರ ಬರೆದಂತೆ ಆಗಲಿದೆ ಎಂದರು.

ವಂದೇ ಭಾರತ ಬಗ್ಗೆಯೂ ಚಿಂತನೆ:
ವಿಜಯಪುರದವರೆಗೆ ವಂದೇ ಭಾರತ ರೈಲು ವಿಸ್ತರಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಅವರು ಈ ಭಾಗದ ಯೋಜನೆಗಳ ಬಗ್ಗೆ ಚರ್ಚಿಸುತ್ತಲೇ ಇರುತ್ತಾರೆ. ವಂದೇ ಭಾರತ ರೈಲು ಕನಿಷ್ಠ ೧೩೦-೧೪೦ ವೇಗದಲ್ಲಿ ಚಲಿಸುತ್ತವೆ. ಇಂದು ಕೊಪ್ಪಳದಿಂದ ನಾನು ಆಗಮಿಸುವಾಗ ನೋಡಿದಂತೆ ೧೦೦ ಕಿ.ಮೀ. ವೇಗದಲ್ಲಿ ಈ ಮಾರ್ಗದಲ್ಲಿ ರೈಲು ಸಂಚರಿಸುತ್ತಿದ್ದು, ತಾಂತ್ರಿಕವಾಗಿ ಅವಲೋಕಿಸಬೇಕಾಗುತ್ತದೆ. ಈ ಬಾರಿ ಗದ್ದಿಗೌಡರ ದೆಹಲಿಗೆ ಆಗಮಿಸಿದಾಗ ಈ ಬಗ್ಗೆಯೂ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಂಸದ ಪಿ.ಸಿ.ಗದ್ದಿಗೌಡರ, ತೇರದಾಳ ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಉಪವಿಭಾಗಾಧಿಕಾರಿಗಳಾದ ಸಂತೋಷ ಜಗಲಾಸರ್, ಶ್ವೇತಾ ಬೀಡಿಕರ್, ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಖಜ್ಜಿಡೋಣಿಯಿಂದ ರಸ್ತೆ ಮೂಲಕ ಲೋಕಾಪುರಕ್ಕೆ ತೆರಳಿದ ಸಚಿವರು ಅಲ್ಲಿನ ಕಾಮಗಾರಿಗಳನ್ನೂ ವೀಕ್ಷಿಸಿದರು.

Previous articleಕಾಯಕ ಮಾಡುವವರಿಗೆ ಯಾವತ್ತೂ ಬಡತನ ಬರುವುದಿಲ್ಲ
Next articleಮೂರೇ ತಿಂಗಳು ಕಾಯ್ದು ನೋಡಿ…