ಕಾರವಾರ: ತುರ್ತು ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ನಾಗರಿಕರ ರಕ್ಷಣೆ ಮಾಡುವ `ಆಪರೇಷನ್ ಅಭ್ಯಾಸ್’ ಅಂಗವಾಗಿ ಜಿಲ್ಲೆಯಲ್ಲಿ ಮೇ ೧೨ ರಂದು ೫ ರೀತಿಯ ಅಣಕು ಕಾರ್ಯಚರಣೆಯನ್ನು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಮಾಡಲಾಗುವುದು. ಇದು ಕೇವಲ ಅಣಕು ಕಾರ್ಯಾಚರಣೆಯಾದ ಕಾರಣ ಜನ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಣಕು ಕಾರ್ಯಚರಣೆ ಸಂದರ್ಭದಲ್ಲಿ ಜಿಲ್ಲೆಯ ಜನತೆ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು. ಜಿಲ್ಲೆಯು ಅತ್ಯಂತ ಉದ್ದವಾದ ಕರಾವಳಿ ತೀರವನ್ನು ಹೊಂದಿರುವುದು ಮಾತ್ರವಲ್ಲದೇ ಅನೇಕ ಸೂಕ್ಷ್ಮ ಪ್ರದೇಶಗಳನ್ನು ಒಳಗೊಂಡಿದೆ. ಆದ್ದರಿಂದ ಈ ಪ್ರದೇಶದಲ್ಲಿ ತುರ್ತು ಸಂದರ್ಭದಲ್ಲಿ ನಾಗರಿಕರ ರಕ್ಷಣೆ ಮಾಡುವ ಕುರಿತಂತೆ ಬೆಂಕಿ ಅವಘಡ, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಿಕೆ, ಕಟ್ಟಡ ಕುಸಿತ, ಬ್ಲಾಕ್ ಔಟ್ ಚಟುವಟಿಕೆಗಳ ಅಣಕು ಕಾರ್ಯಚರಣೆ ಮಾಡಲಾಗುತ್ತದೆ ಎಂದರು.