ಹೆಚ್‌ಎಎಲ್ ಸಿಬ್ಬಂದಿಗೆ ರಜೆ ರದ್ದು, ಓವರ್‌ಟೈಂಗೆ ಸೂಚನೆ

ಬೆಂಗಳೂರು: ಭಾರತ ಪಾಕ್ ಉದ್ವಿಗ್ನ ಸ್ಥಿತಿ ಹಿನ್ನೆಲೆ ಬೆಂಗಳೂರಿನ ಹೆಚ್‌ಎಎಲ್‌ನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಸಿಬ್ಬಂದಿ ರಜೆಗಳನ್ನು ರದ್ದು ಮಾಡಲಾಗಿದ್ದು, ಓವರ್ ಟೈಂ ಕೆಲಸಕ್ಕೆ ಸಿದ್ಧವಾಗಿರುವಂತೆ ಸೂಚನೆ ನೀಡಲಾಗಿದೆ.
ಹೆಚ್‌ಎಎಲ್ ಭಾರತೀಯ ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾಗಿದೆ. ಒಂದು ವೇಳೆ ಪೂರ್ಣ ಪ್ರಮಾಣದಲ್ಲಿ ಯುದ್ಧ ಆರಂಭವಾದಲ್ಲಿ ಮತ್ತಷ್ಟು ರಕ್ಷಣಾ ಸಾಮಾಗ್ರಿಗಳ ಅವಶ್ಯಕತೆ ಬೀಳಬಹುದು ಎಂಬ ಕಾರಣಕ್ಕಾಗಿ ಹೆಚ್‌ಎಎಲ್ ಉದ್ಯೋಗಿಗಳ ರಜೆಯನ್ನು ರದ್ದು ಮಾಡಿ ಓವರ್ ಟೈಂ ಕೆಲಸ ಮಾಡಲು ಸಿದ್ಧರಾಗಿರುವಂತೆ ತನ್ನ ಉದ್ಯೋಗಿಗಳಿಗೆ ಆಡಳಿತ ಮಂಡಳಿ ಸೂಚನೆ ನೀಡಿದೆ.
ದೂರ ಸಂಪರ್ಕ ಕಂಪನಿಗಳಿಗೂ ಸೂಚನೆ: ದೂರ ಸಂಪರ್ಕ ಕಂಪನಿಗಳು ಕೂಡಾ ತಮ್ಮ ಸೇವೆಯನ್ನು ಮತ್ತಷ್ಟು ಚುರುಕಾಗಿಸಬೇಕು ಎಂದು ಈಗಾಗಲೇ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ತನ್ನ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ ಟ್ರಾನ್ಸಿಮಿಷನ್ ಅನ್ನು ಮತ್ತಷ್ಟು ಪ್ರಬಲಗೊಳಿಸಲು ಸೂಚನೆ ನೀಡಿದೆಯಲ್ಲದೆ, ಇನ್ನಿತರ ಖಾಸಗಿ ದೂರ ಸಂಪರ್ಕ ಕಂಪನಿಗಳಿಗೂ ಇದೇ ರೀತಿಯ ಸಂದೇಶ ರವಾನೆ ಮಾಡಿದೆ.