ಇದೊಂದು ವ್ಯವಸ್ಥಿತ ಅಪರಾಧ ಕೃತ್ಯ
ಬೆಂಗಳೂರು: ಕಾಂಗ್ರೆಸ್ ನಾಯಕರು ಇದು ಮುಸ್ಲಿಮರ ಸರ್ಕಾರ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಇಂತಹ ಹೇಳಿಕೆಗಳೇ ಸಮಾಜಘಾತುಕರಿಗೆ ಬೆಂಬಲ ನೀಡುತ್ತಿದೆ. ಸರ್ಕಾರದ ಬೆಂಬಲದಿಂದಾಗಿಯೇ ಉದಯಗಿರಿ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಲು ಪ್ರಯತ್ನಿಸಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮತಾಂಧರ ಮೇಲಿನ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆಯುತ್ತಿರುವುದರಿಂದ ಪೊಲೀಸರ ಆತ್ಮಸ್ಥೈರ್ಯ ಕುಗ್ಗುತ್ತಿದೆ. ಹುಬ್ಬಳ್ಳಿ ಗಲಭೆ ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಂಡಿದ್ದರಿಂದ ಸಮಾಜಘಾತುಕರಿಗೆ ಭಯವೇ ಇಲ್ಲದಂತಾಗಿದೆ. ಐದಾರು ಚೀಲಗಳಲ್ಲಿ ಕಲ್ಲು ತುಂಬಿಕೊಂಡು ತಂದು ಠಾಣೆ ಮೇಲೆ ಸೋಮವಾರ ಸಂಜೆ ದಾಳಿ ಮಾಡಿದ್ದಾರೆ. ಈ ದಾಂಧಲೆಯಲ್ಲಿ ಪೊಲೀಸ್ ಅಧಿಕಾರಿ ಸೇರಿ ಹಲವಾರು ಪೊಲೀಸರಿಗೆ ಗಾಯಗಳಾಗಿವೆ. ಅಷ್ಟೇ ಅಲ್ಲ, ಪೊಲೀಸರ ವಾಹನಗಳನ್ನು ಜಖಂಗೊಳಿಸಿದ್ದಾರೆ. ಅಕ್ಕಪಕ್ಕದ ಹಿಂದುಗಳಿಗೆ ಬೆದರಿಕೆ ಹಾಕಿದ್ದಾರೆ. ಇದೊಂದು ವ್ಯವಸ್ಥಿತ ಅಪರಾಧ ಕೃತ್ಯದಂತಿದ್ದು, ಕಾಂಗ್ರೆಸ್ ಸರ್ಕಾರದ ಓಲೈಕೆ, ಮುಸ್ಲಿಮರ ತುಷ್ಟಿಕರಣವು ಮತಾಂಧ ದುಷ್ಕರ್ಮಿಗಳಿಗೆ ಸುರಕ್ಷತೆಯ ಅಭಯ ನೀಡಿದಂತಿದ್ದು, ಸಾಮಾನ್ಯ ಮುಸ್ಲಿಮರು ಕೂಡ ಬೇಸತ್ತುಕೊಳ್ಳುವಂತಾಗಿದೆ. ಸಾಂಸ್ಕೃತಿಕ, ಶಾಂತಿಪ್ರಿಯರ ನಗರದಲ್ಲಿ ಮತಾಂಧರ ಅಟ್ಟಹಾಸ ಮೆರೆದಿದ್ದು, ಘಾತುಕರು ಎಲ್ಲೇ ಇದ್ದರೂ ಹುಡುಕಿ ಬಂಧಿಸಿ ಕಾನೂನು ಪ್ರಕಾರ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಸರ್ಕಾರ ಸತ್ತು ಹೋಗಿದೆ ಎಂದು ಜನರು ಭಾವಿಸುವಂತಾಗುತ್ತದೆ ರಾಜ್ಯ ಸರ್ಕಾರದ ಅಸಹಾಯತೆಯನ್ನು ಮತಾಂಧರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.