ಹುಬ್ಬಳ್ಳಿ: ಹುಬ್ಬಳ್ಳಿ-ಅಂಕೋಲಾ ಉದ್ದೇಶಿತ ರೈಲ್ವೆ ಮಾರ್ಗದ ಅಂತಿಮ ಸಮೀಕ್ಷಾ ಕಾರ್ಯ ೨೦೨೪ರ ಡಿಸೆಂಬರ್ ಅಂತ್ಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಈ ನಡುವೆ ಮಾರ್ಗದ ನಿಲ್ದಾಣಗಳ ನಿರ್ಮಾಣ ಮತ್ತು ಮರುವಿನ್ಯಾಸದ ಪ್ರಕ್ರಿಯೆ ಆರಂಭವಾಗಿದೆ. ಉದ್ದೇಶಿತ ಮಾರ್ಗದಲ್ಲಿ ಈಗಾಗಲೇ ಕೊಂಕಣ ರೈಲ್ವೆಯ ಪ್ರಧಾನ ಜಂಕ್ಷನ್ ಆಗಿರುವ ಅಂಕೋಲಾ ಕಾರ್ಯನಿರ್ವಹಿಸುತ್ತಿದ್ದು, ಇದರ ಮರು ವಿನ್ಯಾಸದ ಪರಿಕಲ್ಪನೆ ಯೋಜನಾ ನಕ್ಷೆ'ಯನ್ನು ನೈಋತ್ಯ ರೈಲ್ವೆ ಸಿದ್ಧಪಡಿಸಿದೆ. ಹುಬ್ಬಳ್ಳಿಯಿಂದ ಆರಂಭಗೊಳ್ಳಲಿರುವ ರೈಲು ಮಾರ್ಗ ಅಂಕೋಲಾದಲ್ಲಿ ಕೊನೆಗೊಳ್ಳುತ್ತದೆ. ಅಂಕೋಲಾದಲ್ಲಿ ಕೊಂಕಣ ರೈಲು ಮಾರ್ಗ ಹಾದು ಹೋಗುತ್ತಿದ್ದು, ಆ ನಿಲ್ದಾಣ ಕೊಂಕಣ ರೈಲ್ವೆ ನಿಗಮಕ್ಕೆ (ಕೆಆರ್‌ಸಿಎಲ್) ಸೇರುತ್ತದೆ. ಕೊಂಕಣ ರೈಲ್ವೆಯ ಈಗಿರುವ ಮಾರ್ಗಕ್ಕೆ ಉದ್ದೇಶಿತ ಹುಬ್ಬಳ್ಳಿ-ಅಂಕೋಲಾ ಹೊಸ ಮಾರ್ಗ ಸೇರ್ಪಡೆಯಾದಾಗ, ಅಂಕೋಲಾ ನಿಲ್ದಾಣದ ಈಗಿರುವ ಒಳ-ಹೊರ ವಿನ್ಯಾಸವೂ ಸೇರಿದಂತೆ ಈಗಿರುವ ಭೌತಿಕ ಸ್ವರೂಪ ಬದಲಾಗಬೇಕಾಗಿದೆ. ಹೀಗಾಗಿ ಮಾರ್ಗಕ್ಕೆ ಪೂರಕವಾಗುವ ಮರು ವಿನ್ಯಾಸದ ಪರಿಕಲ್ಪನಾ ನಕ್ಷೆಯನ್ನು ಹುಬ್ಬಳ್ಳಿ ನೈಋತ್ಯ ರೈಲ್ವೆ ನಿರ್ಮಾಣ ವಿಭಾಗ ಸಿದ್ಧಪಡಿಸಿದೆ. ಈ ನಕ್ಷೆಯ ನಿಯಮಾನುಸಾರ ಅನುಮೋದನೆಗಾಗಿ ನೈಋತ್ಯ ರೈಲ್ವೆಯು ಕೊಂಕಣ ರೈಲ್ವೆ ನಿಗಮಕ್ಕೆ ಪತ್ರ ಬರೆದಿದೆ ಹಾಗೂ ನಕ್ಷೆಯನ್ನು ರವಾನಿಸಿದೆ.
ಇದೊಂದು ಸಹಜ ಆಡಳಿತಾತ್ಮಕ ಪ್ರಕ್ರಿಯೆಯಾಗಿದ್ದು, ನೈಋತ್ಯ ರೈಲ್ವೆ ನಿರ್ಮಾಣ ವಿಭಾಗದ ಉಪ ಪ್ರಧಾನ ಎಂಜಿನಿಯರ್ ವಿನಾಯಕ ಪಡಲೇಕರ್ ಜೂನ್ ೨೦ರಂದು ಕೊಂಕಣ ರೈಲ್ವೆಯ ಪ್ರಧಾನ ಮುಖ್ಯ ಎಂಜಿನಿಯರ್ ಅವರಿಗೆ ನಕ್ಷೆಯನ್ನು ರವಾನಿಸಿದ್ದಾರೆ.
`ಅಂಕೋಲಾ ನಿಲ್ದಾಣ ಮರುವಿನ್ಯಾಸ ಪರಿಕಲ್ಪನಾ ನಕ್ಷೆಗೆ ಕೊಂಕಣ ರೈಲ್ವೆ ನಿಗಮ ಅಧಿಕೃತ ಒಪ್ಪಿಗೆ ಸೂಚಿಸಿ ನೈಋತ್ಯ ರೈಲ್ವೆಗೆ ಅನುಮೋದನಾ ಪತ್ರ ಕೊಟ್ಟ ನಂತರ ಮುಂದಿನ ಪ್ರಕ್ರಿಯೆಗಳಿಗೆ ಚಾಲನೆ ದೊರೆಯಲಿದೆ. ಅಂಕೋಲಾ ಸೇರಿ, ಮಾರ್ಗದ ಎಲ್ಲ ನಿಲ್ದಾಣಗಳ ವಿಸ್ತೃತ ಯೋಜನಾ ವರದಿ (ಡಿಪಿಆರ್) ಕೊಂಕಣ ರೈಲ್ವೆಯ ಅನುಮೋದನೆಯ ನಂತರ ಸಿದ್ಧವಾಗಲಿದ್ದು, ಎಲ್ಲ ನಿಲ್ದಾಣಗಳ ಕುರಿತು ನೈಋತ್ಯ ರೈಲ್ವೆ ವಲಯವೇ ಸಮಗ್ರ ಡಿಪಿಆರ್ ಸಿದ್ಧಪಡಿಸಲಿದೆ’ ಎಂದು ವಲಯದ ಉನ್ನತ ಮೂಲಗಳು ತಿಳಿಸಿವೆ.
ಸಮೀಕ್ಷೆ ಅಂತಿಮ ಹಂತದಲ್ಲಿ
ಏತನ್ಮಧ್ಯೆ, ಹುಬ್ಬಳ್ಳಿ-ಅಂಕೋಲಾ ಮಾರ್ಗ ಮರು ಸಮೀಕ್ಷೆ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ. ಈಗಾಗಲೇ ಒಮ್ಮೆ ಸಮೀಕ್ಷೆಯಾಗಿ, ಆ ಸಮೀಕ್ಷಾ ವರದಿಯನ್ನು ವನ್ಯಜೀವಿ ಮಂಡಳಿ ತಿರಸ್ಕರಿಸಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಹೆಚ್ಚು ಅರಣ್ಯ ನಾಶವಿಲ್ಲದಂತೆ ಮರು ಸಮೀಕ್ಷೆಗೆ ಸೂಚಿಸಲಾಗಿದೆ ಎನ್ನುವ ಮಾತುಗಳು ಈಗಾಗಲೇ ಕೇಳಿ ಬಂದಿವೆ.
ಹೀಗಾಗಿ ಮರು ಸಮೀಕ್ಷೆಯ ಜೊತೆಗೆ, ಈಗಿರುವ ಅಂಕೋಲಾ-ಗುತ್ತಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಕಡೆಗಳಲ್ಲಿ ಹಳಿ ಜೋಡಣೆ ಸಾಧ್ಯವೇ ಎಂಬ ಪರಿಶೀಲನೆಯೂ ಮರು ಸಮೀಕ್ಷೆಯಲ್ಲಿ ನಡೆಯುತ್ತಿದೆ.
`ಮರು ಸಮೀಕ್ಷೆಯು ಜುಲೈ ಅಂತ್ಯದಲ್ಲಿ ಪೂರ್ಣಗೊಂಡು ಆಗಸ್ಟ್ ವೇಳೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ವರದಿ ಸಲ್ಲಿಕೆಯಾಗಲಿದೆ. ವನ್ಯಜೀವಿ ಮಂಡಳಿಯ ಅನುಮೋದನೆಯ ನಂತರ ೨೦೨೪ರ ಡಿಸೆಂಬರ್ ಹೊತ್ತಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆ ಇದೆ’ ಎಂದು ಮೂಲಗಳು ವಿವರಿಸಿವೆ.