ಹುಬ್ಬಳ್ಳಿ: 2022ರ ಏಪ್ರಿಲ್ 16ರಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಗುಂಪೊಂದರ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಹಿಂಪಡೆಯಲು ಕರ್ನಾಟಕದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದ್ದ ಬೆನ್ನಲ್ಲೇ ಗುರುವಾರ ಕಾನೂನು ಪ್ರಕ್ರಿಯೆ ಆರಂಭಗೊಂಡಿವೆ. ಈ ಸಂಬಂಧ ಅಂಜುಮನ್-ಎ-ಇಸ್ಲಾಂ ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿತ್ತು. ಬಳಿಕ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಿಂಪಡೆಯಲು ನಿರ್ಧರಿಸಿದ್ದ 43 ಪ್ರಕರಣಗಳಲ್ಲಿ ಇದೂ ಒಂದು ಎಂದು ತೀರ್ಮಾನಿಸಲಾಗಿತ್ತು.
ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಯೊಬ್ಬ ಮಾಡಿದ್ದ ಅವಹೇಳನಕಾರಿ ಪೋಸ್ಟ್ ನಿಂದ ಅಸಮಾಧಾನಗೊಂಡ ಅಲ್ಪಸಂಖ್ಯಾತ ಸಮುದಾಯದ ಸುಮಾರು 150 ಜನರು ಕಲ್ಲು ಮತ್ತು ದೊಣ್ಣೆಗಳೊಂದಿಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿ, ಕಲ್ಲು ತೂರಾಟ ನಡೆಸಿದ್ದರಿಂದ ಕರ್ತವ್ಯದಲ್ಲಿದ್ದ ಹಲವರು ಗಾಯಗೊಂಡಿದ್ದರು. ಅಲ್ಲಿದ್ದ ಹಲವಾರು ಸರ್ಕಾರಿ ಮತ್ತು ಖಾಸಗಿ ವಾಹನಗಳು ಜಖಂಗೊಂಡಿದ್ದವು.