ಹತಾಶೆ ಬೇಡ, ಸಂಯಮ ಇರಲಿ, ಪರಿಹಾರ ಇದೆ

0
15

ಹೆಂಡತಿಯರ ದೌರ್ಜನ್ಯದಿಂದ ಹಲವಾರು ಗಂಡಂದಿರು ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇಂತಹ ಪ್ರಕರಣಗಳು ಉನ್ನತ ಶಿಕ್ಷಣ ಪಡೆದ ದಂಪತಿಗಳಲ್ಲಿ ಉದ್ಭವಿಸುತ್ತಿವೆ. ಮದುವೆಯಾಗಿ ಎರಡು-ಮೂರು ವರ್ಷಗಳಲ್ಲಿ ವೈವಾಹಿಕ ವ್ಯಾಜ್ಯ ಕೋರ್ಟ್ ಮೆಟ್ಟಲು ಎರುತ್ತವೆ. ಕೂಡಿಬಾಳುವ ಇಚ್ಛೆಗಿಂತ ಗಂಡನ ಆರ್ಥಿಕ ಪರಿಸ್ಥಿತಿಯನ್ನು ದುರುಪಯೋಗಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಿರ್ವಹಿಸಿದ ಜೀವನಾಂಶ ಕೋರಿ ದಾಖಲಿಸಿದ ಸಿವಿಲ್ ದಾವೆ ನೆನಪಾಯಿತು. ವಿಷಯ, ಪ್ರಕರಣ ಸಣ್ಣದು. ಆದರೆ ಕಕ್ಷಿದಾರನ ಮಧ್ಯಮ ವರ್ಗದ ಜೀವನಶೈಲಿ, ಆರ್ಥಿಕ ಪರಿಸ್ಥಿತಿಗೆ ಪ್ರತಿ ತಿಂಗಳು ರೂ. ೮ ಸಾವಿರ ಹೆಂಡತಿಗೆ ಜೀವನಾಂಶವನ್ನು ಕೋರ್ಟ್ ಆದೇಶದಂತೆ ಕೊಡುವದು ದೊಡ್ಡ ಹೊರೆ ಆಗಿತ್ತು. ಜೀವನಾಂಶದ ಸಿವಿಲ್ ಜಡ್ಜ್ಮೆಂಟ್ ಮತ್ತು ಡಿಕ್ರಿ ಆದೇಶದ ಮೇಲೆ ಮೇಲ್ಮನವಿ ದಾಖಲಿಸಿದೆ.
ಮೇಲ್ಮನವಿ ಪ್ರಕರಣ ಮುಂದೂಡಿದ ದಿನಾಂಕದಂದು ಪ್ರಕರಣವನ್ನು ಕೂಗಿಸಲಾಯಿತು. ಇನ್ನೊಂದು ಮುದ್ದತ್ತು ನೀಡಲು ಪ್ರಾರ್ಥಿಸಿದೆ. ನ್ಯಾಯಾಧೀಶರು “ವಕೀಲರೆ, ಹೋದ ತಾರೀಕಿನಂದೇ ನಿಮಗೆ ಈ ಮುದ್ದತ್ತಿನಂದು ಆರ್ಗ್ಯುಮೆಂಟ್ ಮಾಡಲು ಮೊದಲೆ ತಿಳಿಸಿದ್ದೇನೆ. ನ್ಯಾಯಾಲಯದಲ್ಲಿ ಬಹಳ ಪ್ರಕರಣಗಳು ಪೆಂಡಿಂಗ್ ಇವೆ. ಇಂತಹ ಪ್ರಕರಣಗಳನ್ನು ಮುಂದೂಡುತ್ತ ಹೋದರೆ ಹೇಗೆ? ನೀವೇ ಕೆಳ ನ್ಯಾಯಾಲಯದಲ್ಲಿ ಕೇಸು ನಡೆಸಿದ್ದೀರಿ. ಕೇಸಿನ ಸಂಪೂರ್ಣ ಮಾಹಿತಿ ಇದೆ. ಮಧ್ಯಾಹ್ನ ಕಲಾಪದಲ್ಲಿ ಆರ್ಗ್ಯುಮೆಂಟ್ ಮಾಡಿ” ಎಂದು ಒತ್ತಾಯಿಸಿ ಕೇಸು ಮುದ್ದತ್ತು ನೀಡದೆ ವಿಚಾರಣೆಗೆ ಇಟ್ಟುಕೊಂಡರು.
ಮಧ್ಯಾಹ್ನದ ಕಲಾಪದಲ್ಲಿ ಮೇಲ್ಮನವಿ ಪ್ರಕರಣವನ್ನು ಕೈಗೆತ್ತಿಕೊಂಡರು. ನನ್ನ ವಾದವನ್ನು ಪ್ರಾರಂಭಿಸಿದೆ. “ಯುವರ್ ಆನರ್, ಕೆಳ ನ್ಯಾಯಾಲಯದ ತೀರ್ಪು ಮತ್ತು ಡಿಕ್ರಿ ಆದೇಶವನ್ನು ರದ್ದುಪಡಿಸಲು ಕೋರಿ ನನ್ನ ಕಕ್ಷಿದಾರ ಮೇಲ್ಮನವಿಯನ್ನು ಸಲ್ಲಿಸಿದ್ದಾನೆ. ವಾದ ಪ್ರಾರಂಭವನ್ನು, ದಾವೆಯ ಸಂಪೂರ್ಣ ಸಂಗತಿಯನ್ನು, ಕೆಳ ನ್ಯಾಯಾಲಯದ ಅಭಿಪ್ರಾಯವನ್ನು ಅಲ್ಲದೆ ಯಾವ ಕಾರಣಗಳಿಂದ ಕೆಳ ನ್ಯಾಯಾಲಯದ ತೀರ್ಪು ರದ್ದುಪಡಿಸಬೇಕು ಅನ್ನುವ ಅಂಶಗಳನ್ನು ತಮ್ಮ ಮುಂದೆ ಮಂಡಿಸುತ್ತೇನೆ. ಮೇಲ್ಮನವಿದಾರ ಹಾಗೂ ಎದುರುದಾರಳು ಮುಸ್ಲಿಂ ಧರ್ಮಕ್ಕೆ ಸಂಬಂಧಿಸಿದವರು ಆದ್ದರಿಂದ ಮುಸ್ಲಿಂ ಕಾನೂನು ಅಡಿಯಲ್ಲಿ ಈ ಪ್ರಕರಣವನ್ನು ಪರಿಗಣಿಸಬೇಕಾಗುತ್ತದೆ. ಎದುರುದಾರಳು ಕೆಳ ನ್ಯಾಯಾಲಯದಲ್ಲಿ ಪ್ರತಿ ತಿಂಗಳು ರೂ. ೧೮,೦೦೦ ಜೀವನಾಂಶ ಕೇಳಿ ದಾವೆ ಮಾಡಿ ವಾದಪತ್ರ ಸಲ್ಲಿಸಿರುತ್ತಾಳೆ. ವಾದಪತ್ರದಲ್ಲಿ ಮೇಲ್ಮನವಿದಾರ ಮತ್ತು ಎದುರುದಾರಳ ನಿಖಾಹ್ ಸುಮಾರು ೩೦ ವರ್ಷಗಳ ಹಿಂದೆ ಮುಸ್ಲಿಂ ಕಾನೂನು ಪದ್ಧತಿ ಪ್ರಕಾರ ನಡೆದಿರುತ್ತದೆ. ನಿಖಾಹ್ ನಂತರ ಸುಮಾರು ೧೦ ವರ್ಷಗಳವರೆಗೆ ಮೇಲ್ಮನವಿದಾರನು ಮತ್ತು ಎದುರುದಾರಳು ತಮ್ಮ ವೈವಾಹಿಕ ಜೀವನ ಸುಖದಿಂದ ನಡೆಸಿರುತ್ತಾರೆ. ಆನಂತರ ಇಬ್ಬರಲ್ಲಿ ಮನಸ್ತಾಪ ಬಂದಿರುತ್ತದೆ. ಎದುರುದಾರಳನ್ನು ವರದಕ್ಷಿಣೆ ತರುವಂತೆ ಮತ್ತು ಮಕ್ಕಳಿಲ್ಲ ಎಂದು ಅವಮಾನಿಸಿ ಮನೆಯಿಂದ ಹೊರ ಹಾಕಿರುತ್ತಾನೆ. ತನಗೆ ದುಡಿಯಲು ಆಗುವದಿಲ್ಲ ಮತ್ತು ಯಾವುದೇ ಉತ್ಪನ್ನ ಇರುವದಿಲ್ಲ. ಈಗ ಮೇಲ್ಮನವಿದಾರ ಎರಡನೆ ಲಗ್ನವಾಗಿದ್ದು, ಎರಡು ಮಕ್ಕಳು ಆಗಿವೆ. ತನಗೆ ಪ್ರತಿ ತಿಂಗಳು ಜೀವನಾಂಶ ಕೊಡಲು ಮೇಲ್ಮನವಿದಾರನಿಗೆ ಆದೇಶ ಮಾಡಲು ಕೋರಿ ದಾವೆ ಮಾಡಿದ್ದಳು. ಮೇಲ್ಮನವಿದಾರ ತನ್ನ ಲಿಖಿತ ವಿವರಣೆ /ಕೈಫಿಯತ್ ದಾಖಲಿಸಿ ಎದುರುದಾರಳು ಮೇಲಿಂದ ಮೇಲೆ ವಿನಾಕಾರಣ ಮೇಲ್ಮನವಿದಾರನಿಗೆ ಹೇಳದೆ ಕೇಳದೆ ತನ್ನ ತವರು ಮನೆಗೆ ಹೋಗಿ ಬರುತ್ತಿದ್ದಳು. ಹೀಗೆ ಅವರಲ್ಲಿ ವೈವಾಹಿಕ ಜೀವನದಲ್ಲಿ ಕಂದಕ ಹೆಚ್ಚಾಗುತ್ತ ಹೋಯಿತು. ಇವರ ವೈವಾಹಿಕ ಜೀವನದಿಂದ ಮಕ್ಕಳು ಆಗಿರುವದಿಲ್ಲ. ಎದುರುದಾರಳು ಹೀಗೆ ಗಂಡನನ್ನು ತೊರೆದುಹೋಗಿ ತನ್ನ ತವರುಮನೆಯಲ್ಲಿ ಶಾಶ್ವತವಾಗಿ ಉಳಿದಳು. ಮೇಲ್ಮನವಿದಾರನು ಎದುರುದಾರಳ ದಾರಿಯನ್ನು ಕಾಯ್ದು ಕೊನೆಗೆ ಎರಡನೆಯ ಲಗ್ನವನ್ನು ಮಾಡಿಕೊಂಡಿರುತ್ತಾನೆ. ಎರಡನೆಯ ನಿಖಾಹ ಮುಸ್ಲಿಂ ಕಾನೂನಿನ ಅಡಿಯಲ್ಲಿ ನಿಷಿದ್ಧವು ಅಲ್ಲ, ಅಪರಾಧ ಆಗಿರುವದಿಲ್ಲ. ಮೇಲ್ಮನವಿದಾರ ಮತ್ತು ಎರಡನೆಯ ಹೆಂಡತಿಯ ವೈವಾಹಿಕ ಜೀವನದಿಂದ ಮೂರು ಮಕ್ಕಳು ಜನಿಸಿರುತ್ತಾರೆ. ಇಷ್ಟು ವರ್ಷ ಮೇಲ್ಮನವಿದಾರನಿಂದ ದೂರವಾಗಿದ್ದ ಎದುರುದಾರಳು ಮೇಲ್ಮನವಿದಾರರ ಮೇಲೆ ಪ್ರತಿ ತಿಂಗಳು ೧೮,೦೦೦ ರೂಪಾಯಿ ಜೀವನಾಂಶ ಕೇಳಿ ದಾವೆ ಮಾಡಿದ್ದಾಳೆ. ಯಾವುದೇ ಕಾರಣ ಇಲ್ಲದೆ ತನ್ನನ್ನು ತೊರೆದಿದ್ದು, ಉಪಜೀವನ ಮಾಡಿಕೊಳ್ಳಲು ಶಕ್ತ ಇರುತ್ತಾಳೆ. ನಾನು ವಯಸ್ಸಾದ ತಂದೆ ತಾಯಿ, ಎರಡನೆ ಹೆಂಡತಿ ಮೂರು ಮಕ್ಕಳು, ಮದುವೆ ಆಗದ ಮೂರು ಸಹೋದರಿಯರನ್ನು ಸಾಕುವ ಜವಾಬ್ದಾರಿ ಇದೆ. ಅವಳು ಕೇಳಿದ ಹಾಗೆ ಉಪ ಜೀವನಕ್ಕೆ ಹಣ ಕೊಡಲು ಸಾಧ್ಯವಿಲ್ಲ, ನಮ್ಮ ಜೊತೆ ಬಂದು ಜೀವನ ಸಾಗಿಸಲಿ. ನನ್ನ ಹೆಸರಿಗೆ ಇರುವ ಭೂಮಿ ಬರಡು ಭೂಮಿ ಇರುತ್ತದೆ. ಯಾವುದೆ ಕೃಷಿ ಉತ್ಪನ್ನ ಇಲ್ಲವೆಂದು ವಿವರಣೆ ನೀಡಿದನು. ಕೆಳ ನ್ಯಾಯಾಲಯವು, ವಾದಿ ಪ್ರತಿವಾದಿಯರ ಸಾಕ್ಷಿ ಹೇಳಿಕೆ,
ದಾಖಲಾತಿಗಳನ್ನು ಪರಿಶೀಲಿಸಿ, ವಾದವನ್ನು ಕೇಳಿ, ಮೇಲ್ಮನವಿದಾರನಿಗೆ ಪ್ರತಿ ತಿಂಗಳು ರೂ. ೮೦೦೦ ಜೀವನಾಂಶ ಕೊಡಲು ಮೇಲ್ಮನವಿದಾರನಿಗೆ ಜಡ್ಜ್ಮೆಂಟ್ ಡಿಕ್ರಿ ಆದೇಶ ಮಾಡಿತು. ಆದೇಶವನ್ನು ಪ್ರಶ್ನಿಸಿ ನನ್ನ ಕಕ್ಷಿದಾರ ಮೇಲ್ಮನವಿಯನ್ನು ಸಲ್ಲಿಸಿರುತ್ತಾನೆ. ಕೆಳ ನ್ಯಾಯಾಲಯ ಕೇವಲ ಮೇಲ್ಮನವಿದಾರನ ಹೆಸರಿನಲ್ಲಿ ಜಮೀನು ಇರುತ್ತದೆ ಅನ್ನುವುದನ್ನು ಮಾತ್ರ ಪರಿಶೀಲಿಸಿ ಪ್ರತಿ ತಿಂಗಳು ರೂ. ೧೮,೦೦೦ ಜೀವನಾಂಶ ಕೊಡಲು ಆದೇಶ ಮಾಡಿದೆ. ಜಮೀನಿನಿಂದ ಎಷ್ಟು ಕೃಷಿ ಉತ್ಪನ್ನ ಬರುತ್ತದೆ ಅನ್ನುವುದನ್ನು ರುಜುವಾತುಪಡಿಸಲು ಎದುರುದಾರಳು ಯಾವುದೇ ದಾಖಲಾತಿ ಸಲ್ಲಿಸದ್ದನ್ನು ಗಮನಿಸಿರುವುದಿಲ್ಲ. ಆದ್ದರಿಂದ ಮೇಲ್ಮನವಿಯನ್ನು ಪುರಸ್ಕರಿಸಿ ಕೆಳ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು. ಇಷ್ಟು ನನ್ನ ವಾದ” ಎಂದು ವಾದ ಮುಗಿಸಿದೆ. ಎದುರುದಾರಳು ಗೈರು ಉಳಿದಿರುವುದರಿಂದ ನ್ಯಾಯಾಲಯ ಪ್ರಕರಣವನ್ನು ಆದೇಶಕ್ಕಾಗಿ ಮುಂದೂಡಿತು. ನ್ಯಾಯಾಲಯ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿ, ಕೆಳ ನ್ಯಾಯಾಲಯದ ತೀರ್ಪನ್ನು ಮಾರ್ಪಡಿಸಿ, ಮೇಲ್ಮನವಿದಾರ ಎದುರುದಾಳಿಗೆ ಪ್ರತಿ ತಿಂಗಳು ರೂ. ೫೦೦೦ ನೀಡಲು ಆದೇಶ ಮಾಡಿತು. ನ್ಯಾಯ ವ್ಯವಸ್ಥೆಯಲ್ಲಿ ಎಲ್ಲದಕ್ಕೂ ಪರಿಹಾರ ಇದ್ದೇ ಇದೆ. ಹತಾಶರಾಗದೆ ಸಂಯಮದಿಂದ ಕಾನೂನು ದಾರಿಯನ್ನು ಹುಡುಕಿ, ನಮ್ಮ ಅಹವಾಲನ್ನು ನ್ಯಾಯಾಲಯಕ್ಕೆ ಸತ್ವಯುತವಾಗಿ, ಸ್ಪಷ್ಟವಾಗಿ ಮಂಡಿಸಿ ನ್ಯಾಯ ಪಡೆಯಲು ಸಾಧ್ಯವಿದೆ.

Previous articleಭಾರತೀಯ ಏರೋಸ್ಪೇಸ್ ಸಾಗಿದ ಹಾದಿ
Next articleದುಃಖದಲ್ಲಿರುವವರನ್ನು ಸಂತೈಸುವ ರೀತಿ