ಸುಹಾಸ್ ಶೆಟ್ಟಿ ಹತ್ಯೆ: ಭದ್ರತಾ ವೈಫಲ್ಯ ಆರೋಪ ತಳ್ಳಿಹಾಕಿದ ಈಶ್ವರ್ ಖಂಡ್ರೆ

0
26

ದಾವಣಗೆರೆ: ರಾಜ್ಯ ಸರ್ಕಾರದ ಗುಪ್ತಚರ ಇಲಾಖೆ ಮತ್ತು ಭದ್ರತಾ ವೈಫಲ್ಯದಿಂದ ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ನಡೆದಿದೆ ಎಂಬ ಆರೋಪವನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಳ್ಳಿಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್ ವಿಚಾರದಲ್ಲಿ ಕೇಂದ್ರ ಸರ್ಕಾರ ಭದ್ರತಾ ವೈಫಲ್ಯ ಒಪ್ಪಿಕೊಂಡಿದೆ ಎಂದ ಮಾತ್ರಕ್ಕೆ ನಮಗೂ ಒಪ್ಪಿಕೊಳ್ಳಿ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ದುಷ್ಕರ್ಮಿಗಳಿಗೆ, ಭಯೋತ್ಪಾದಕರಿಗೆ, ಕೊಲೆಗಡುಕರಿಗೆ ಸಮಾಜಘಾತುಕ ಶಕ್ತಿಗಳಿಗೆ ಯಾವುದೇ ಜಾತಿ ಇಲ್ಲ. ಕಾಂಗ್ರೆಸ್ ಪಕ್ಷ ಇದನ್ನೆಲ್ಲಾ ಒಪ್ಪುವುದಿಲ್ಲ. ಯಾರು ತಪ್ಪು ಮಾಡಿದ್ದಾರೆ, ಕ್ರಿಮಿನಲ್ ಯಾರಿದ್ದಾರೆ ಅವರಿಗೆ ಉಗ್ರ ಶಿಕ್ಷೆ ಕೊಡದೆ ನಮ್ಮ ಸರ್ಕಾರ ಬಿಡುವುದಿಲ್ಲ ಎಂದರು.
ಭದ್ರತಾ ವೈಫಲ್ಯ, ಪಹಲ್ಗಾಮ್, ಕಂದಹಾರ್ ಸೇರಿದಂತೆ ಇವರ ಅವಧಿಯಲ್ಲಿ ಸಾಕಷ್ಟು ಆಗಿದೆ. ಕಂದಹಾರ್ ಪ್ಲೇನ್ ಹೈಜಾಕ್ ವೇಳೆ ಏನಾಗಿದೆ? ಅಕ್ಷರ ಧಾಮ್ ಮೇಲೆ ದಾಳಿ ಆಗಿದ್ದು ಯಾರ ಕಾಲದಲ್ಲಿ ಅನ್ನೋದು ಹೇಳಲಿ. ಭದ್ರತೆ ಹೆಚ್ಚಿಸಲು, ಬೇಹುಗಾರಿಕೆ ನಡೆಸಲು ಹೆಚ್ಚಿನ ಸಲಹೆ ನೀಡಲಿ ಎಂದು ಖಂಡ್ರೆ ಕೇಂದ್ರದ ವಿರುದ್ಧ ಕಿಡಿಕಾರಿದರು.
ಶತ್ರು ರಾಷ್ಟ್ರಕ್ಕೆ ತಕ್ಕ ಪಾಠ ಕಲಿಸಲು ಸಿಎಂ ಸಿದ್ದರಾಮಯ್ಯ, ನಮ್ಮ ನಾಯಕರಾದ ರಾಹುಲ್ ಗಾಂಧಿ, ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಹೇಳಿದ್ದಾರೆ. ಇಂದಿರಾಗಾಂಧಿ ಯಾವ ರೀತಿ ಆಕ್ಷನ್ ತಗೊಂಡಿದ್ದರು ಆ ರೀತಿ ಕೇಂದ್ರ ಸರ್ಕಾರ ಸುಮ್ಮನೆ ಬೊಗಳೆ ಬಿಡದೆ ಆಕ್ಷನ್ ತೆಗೆದುಕೊಳ್ಳಲಿ. ನಾವು ಪ್ರತಿಪಕ್ಷ ಸ್ಥಾನದಲ್ಲಿದ್ದು ಬೆಂಬಲಿಸುತ್ತೇವೆ ಎಂದರು.
ಕೇಂದ್ರದಿಂದ ಜಾತಿಗಣತಿ ಮಾಡುವ ವಿಚಾರವನ್ನು ಸ್ವಾಗತ ಮಾಡುತ್ತೇವೆ. ವೀರಶೈವ ಲಿಂಗಾಯತ ಜಾತಿಯ ಉಪ ಪಂಗಡಗಳ ವಿಚಾರದ ಬಗ್ಗೆ ಮಹಾಸಭಾದಲ್ಲಿ ಚರ್ಚೆ ಮಾಡಿದ್ದೇವೆ. 90ರಿಂದ 100ರಷ್ಟು ಉಪಜಾತಿ ಇವೆ, ಕೆಲವೊಂದು ಬಿಟ್ಟು ಹೋಗಿವೆ. ಎಲ್ಲವನ್ನು ಕ್ರೂಢೀಕರಿಸಿ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದರು.

Previous articleಭಾರತ-ಪಾಕ್‌ ಜಲಮಾರ್ಗ ಬಂದ್‌
Next article“ದಾದಾ ಸಾಹೇಬ್ ಫಾಲ್ಕೆ” ಚಲನಚಿತ್ರೋತ್ಸವದಲ್ಲಿ “ಈ ಪಾದ ಪುಣ್ಯ ಪಾದ” ಚಿತ್ರಕ್ಕೆ ಪ್ರಶಸ್ತಿ