ಸುರಕ್ಷಿತ ಅಂತರ್ಜಾಲ: ಆನ್‌ ಲೈನ್‌ನಲ್ಲಿ ಸುರಕ್ಷಿತರಾಗಿರಲು ಟಿಪ್ಸ್

ಯಾವುದೇ ಅನಧಿಕೃತ ವಹಿವಾಟುಗಳ ಕುರಿತು ದೂರು ಸಲ್ಲಿಸಲು 1930 ಅನ್ನು ಡಯಲ್ ಮಾಡಿ

ಈಗೀಗ ನಮ್ಮ ಆನ್ ಲೈನ್ ಬಳಕೆ ಬಹಳ ಜಾಸ್ತಿಯಾಗಿದೆ. ಕೆಲಸ, ಸಾಮಾಜಿಕ ಜಾಲತಾಣ ಅಥವಾ ಶಾಪಿಂಗ್‌ ಹೀಗೆ ವಿವಿಧ ಕಾರಣಕ್ಕೆ ನಾವು ಅಂತರ್ಜಾಲ ಬಳಸುತ್ತೇವೆ. ಹಾಗಾಗಿ ವಂಚಕರು ನಾನಾ ವಿಧಾನಗಳ ಮೂಲಕ ನಮ್ಮ ಮಾಹಿತಿಯನ್ನು ಮತ್ತು ಹಣ ಕದಿಯಲು ಹೊಂಚು ಹಾಕುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಫೆ.11ರಂದು ಸುರಕ್ಷಿತ ಅಂತರ್ಜಾಲ ದಿನಾಚರಣೆ ಪ್ರಯುಕ್ತ ವೀಸಾ ಸಂಸ್ಥೆಯು ನಿಮ್ಮ ಡಿಜಿಟಲ್ ಮಾಹಿತಿಯನ್ನು ಸಂರಕ್ಷಿಸಲು ನೆರವಾಗುವ ಕೆಲವು ಟಿಪ್ಸ್‌ಗಳನ್ನು ಇಲ್ಲಿ ನೀಡಿದೆ. ಅವುಗಳೆಂದರೆ:

ಬಯೋಮೆಟ್ರಿಕ್ಸ್‌ ಮೂಲಕ ನಿಮ್ಮ ಸಾಧನಗಳನ್ನು ಸುರಕ್ಷಿತಗೊಳಿಸಿ: ನಿಮ್ಮ ಫೋನ್‌ ಗಳು ಮತ್ತು ಲ್ಯಾಪ್‌ ಟಾಪ್‌ ಗಳಲ್ಲಿ ಫಿಂಗರ್‌ ಪ್ರಿಂಟ್‌ ಗಳು ಅಥವಾ ಫೇಸ್ ರೆಕಗ್ನಿಷನ್ ನಂತಹ ಬಯೋಮೆಟ್ರಿಕ್ ಸೆಕ್ಯೂರಿಟಿ ಫೀಚರ್ ಗಳನ್ನು ಬಳಸಿ. ಈ ಫೀಚರ್ ಗಳು ಸಾಂಪ್ರದಾಯಿಕ ಪಿನ್ ಗಳು ಮತ್ತು ಪಾಸ್ ವರ್ಡ್ ಗಳಿಗಿಂತ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತವೆ. ಪಿನ್ ಗಳು ಮತ್ತು ಪಾಸ್ ವರ್ಡ್ ಗಲು ಡಿಜಿಟಲ್ ಪಾವತಿ ಸಂದರ್ಭದಲ್ಲಿ ಕೈಕೊಡುವ ಸಾಧ್ಯತೆ ಇರುತ್ತದೆ.

ಈಗಲೇ ನಿಮ್ಮ ಕಾರ್ಡ್‌ ಗಳನ್ನು ಟೋಕನೈಸ್ ಮಾಡಿ: ನಿಮ್ಮ ಪೇಮೆಂಟ್ ಗಳು ಸುರಕ್ಷಿತವಾಗಿರಬೇಕು ಎಂಬ ಉದ್ದೇಶದಿಂದ ಆರ್ ಬಿ ಐ ಆನ್‌ ಲೈನ್ ವಹಿವಾಟುಗಳನ್ನು ನಡೆಸಲು ಕಾರ್ಡ್‌ ಗಳನ್ನು ಟೋಕನೈಸ್ ಮಾಡುವುದನ್ನು ಕಡ್ಡಾಯ ಮಾಡಿದೆ. ಈಗ ಶೇ.100ರಷ್ಟು ಕಾರ್ಡ್‌ ಗಳು ಟೋಕನೈಸ್ ಆಗಿದ್ದು, ನೀವು ಈ ವಿಚಾರದಲ್ಲಿ ಹಿಂದೆ ಉಳಿಯಬೇಡಿ.

ವಿಶ್ವಾಸಾರ್ಹ ವೆಬ್‌ ಸೈಟ್‌ ಗಳನ್ನು ಮಾತ್ರ ಬಳಸಿ: ಯು ಆರ್ ಎಲ್ ನ ಆರಂಭದಲ್ಲಿ “https://” ಇರದ ವೆಬ್ ಸೈಟ್ ಗಳನ್ನು ನಂಬಲು ಹೋಗದಿರಿ. ಅಂತಹಾ ವೆಬ್ ಸೈಟ್‌ಗಳಲ್ಲಿ ಭದ್ರತಾ ಸಮಸ್ಯೆ ಇರುವ ಸಾಧ್ಯತೆ ಬಹಳ ಹೆಚ್ಚಿರುತ್ತದೆ. ಸೂಕ್ಷ್ಮ ಮಾಹಿತಿಯನ್ನು ರಕ್ಷಿಸಲು ಮತ್ತು ದುರುದ್ದೇಶಪೂರಿತ ಸಾಫ್ಟ್‌ ವೇರ್ ಅಪಾಯಗಳಿಂದ ಪಾರಾಗಲು ವಿಶ್ವಾಸಾರ್ಹ ಆಪ್ ಸ್ಟೋರ್‌ ನಿಂದ ಆಪ್ ಗಳನ್ನು ಡೌನ್‌ಲೋಡ್ ಮಾಡಿ.

ಪ್ರೈವೆಸಿ ಪಾಲಿಸಿಗಳನ್ನು ಓದಿ: ಈ ಪಾಲಿಸಿಗಳನ್ನು ಓದುವುದು ಖುಷಿ ಕೊಡದೇ ಇರಬಹುದು, ಆದರೆ ಪ್ರೈವೆಸಿ ಪಾಲಿಸಿಗಳನ್ನು ಓದುವುದು, ಪರಿಶೀಲಿಸುವುದರಿಂದ ನಿಮ್ಮ ಡೇಟಾವನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ನೀವು ನಿಮ್ಮ ಒಪ್ಪಿಗೆಯನ್ನು ತಿಳಿಸುವಾಗ ಆ ವಿಚಾರದ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಿ ಮತ್ತು ವಿವೇಕಯುಕ್ತ ನಿರ್ಧಾರ ತೆಗೆದುಕೊಳ್ಳಿ.

ನೀವು ವಂಚನೆಗೆ ಒಳಗಾದರೆ ಏನು ಮಾಡಬೇಕೆಂದು ತಿಳಿಯಿರಿ: ನೀವು ಆನ್‌ ಲೈನ್ ವಂಚನೆಗೆ ಒಳಗಾಗಿದ್ದೀರಿ ಎಂದು ನಿಮಗೆ ಅನ್ನಿಸಿದರೆ ತಕ್ಷಣವೇ ನಿಮ್ಮ ಬ್ಯಾಂಕ್ ಅಥವಾ ಪೇಮೆಂಟ್ ಪೂರೈಕೆದಾರರನ್ನು ಸಂಪರ್ಕಿಸಿ. ಯಾವುದೇ ಅನಧಿಕೃತ ವಹಿವಾಟುಗಳ ಕುರಿತು ದೂರು ಸಲ್ಲಿಸಲು 1930 ಅನ್ನು ಡಯಲ್ ಮಾಡಿ, ಆ ಮೂಲಕ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿಯಲ್ಲಿ ದೂರು ದಾಖಲಿಸಿ.

ಈ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಡಿಜಿಟಲ್ ಜಗತ್ತಿನಲ್ಲಿ ಸುರಕ್ಷಿತವಾಗಿರಬಹುದು. ಈ ವರ್ಷದ ಸುರಕ್ಷಿತ ಅಂತರ್ಜಾಲ ದಿನಾಚರಣೆ ಸಂದರ್ಭದಲ್ಲಿ ಡಿಜಿಟಲ್ ಜಗತ್ತಿನಲ್ಲಿ ಹೆಚ್ಚುತ್ತಿರುವ ಅಪಾಯಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಜಾಗರೂಕರಾಗಿರುವುದರ ಕಡೆಗೆ ಗಮನ ಹರಿಸಿ!