ಧಾರವಾಡ: ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಪ್ರಹ್ಲಾದ ಜೋಶಿ ಆರೋಪ ಮಾಡಿದರು.
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ, ಡಿಸಿಎಂ ಕುರ್ಚಿಗಾಗಿ ಒಬ್ಬರ ವಿರುದ್ಧ ಮತ್ತೊಬ್ಬರು ಹೇಳಿಕೆ ಕೊಡಿಸುತ್ತಿದ್ದಾರೆ. ಹೆಚ್ಚು ಡಿಸಿಎಂ ಸ್ಥಾನ ಸೃಷ್ಟಿಸುವಂತೆ ಸಿದ್ದರಾಮಯ್ಯ ತಮ್ಮ ಬೆಂಬಲಿಗರಿಂದ ಹೇಳಿಸುತ್ತಿದ್ದರೆ, ಸಿಎಂ ಬದಲಾವಣೆ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಹಿಂಬಾಲಕರಿಂದ ಹೇಳಿಸುತ್ತಿದ್ದಾರೆ. ಇದರಿಂದ ರಾಜ್ಯ ಸರ್ಕಾರ ದಾರಿ ತಪ್ಪಿದಂತಾಗಿದೆ ಎಂದು ತಿಳಿಸಿದರು.
ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎನ್ನುತ್ತಾರೆ. ಪರಸ್ಪರ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ತಮ್ಮ ಹಿಂಬಾಲಕರ ಮೂಲಕ ತಮ್ಮದೇ ಸರ್ಕಾರದ ವಿರುದ್ಧ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಏನೇ ಹೇಳಿದರೂ ಯಾರ ವಿರುದ್ಧವೂ ಕ್ರಮ ಆಗುತ್ತಿಲ್ಲ. ಕಾಂಗ್ರೆಸ್ ಇಂಥ ದಯನೀಯ ಸ್ಥಿತಿಗೆ ಬಂದು ನಿಂತಿದೆ ಎಂದರು.
ಒಂದು ವರ್ಷದಲ್ಲಿಯೇ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ಹೀಗಾಗಿದೆ. ಕಾಂಗ್ರೆಸ್ ಬಗ್ಗೆ ಜನ ಬೇಸತ್ತಿದ್ದಾರೆ. ಈ ಎಲ್ಲ ಪರಿಣಾಮ ರಾಜ್ಯದ ಆಡಳಿತ ಮೇಲೆ ಆಗುತ್ತಿದೆ. ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರದ ಆಡಳಿತ ನಿಷ್ಕ್ರಿಯಗೊಳ್ಳುತ್ತಿದೆ ಎಂದು ಆರೋಪಿಸಿದರು.