ನಾಗ್ಪುರ: ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂದೂರ್ ಹೆಸರಿನಲ್ಲಿ ಸೇನಾ ಕಾರ್ಯಾಚರಣೆ ನಡೆಸಿದ್ದಕ್ಕಾಗಿ ಕೇಂದ್ರ ಸರ್ಕಾರ ಮತ್ತು ಭದ್ರತಾ ಪಡೆಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅಭಿನಂದಿಸಿದ್ದಾರೆ. ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ದಾಳಿ ನಡೆಸಿದ್ದರು. ಉಗ್ರರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮತ್ತು ಇಡೀ ದೇಶಕ್ಕೆ ನ್ಯಾಯ ಒದಗಿಸಲು ತೆಗೆದುಕೊಳ್ಳಲಾದ ಈ ಕ್ರಮ ದೇಶದ ಸ್ವಾಭಿಮಾನ ಮತ್ತು ಧೈರ್ಯವನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಧಾರ್ಮಿಕ ಸ್ಥಳಗಳು ಮತ್ತು ಸಾಮಾನ್ಯ ನಾಗರಿಕರ ಮೇಲೆ ಪಾಕಿಸ್ತಾನ ನಡೆಸಿದ ದಾಳಿಯನ್ನು ಖಂಡಿಸುತ್ತೇವೆ. ದಾಳಿಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಸಂತಾಪವನ್ನು ಸೂಚಿಸುತ್ತೇವೆ. ಈ ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಒಗ್ಗಟ್ಟು ದೃಷ್ಟಿಯಿಂದ ದೇಶದ ಎಲ್ಲಾ ನಾಗರಿಕರು ಸರ್ಕಾರ ಹೊರಡಿಸಿದ ಆದೇಶ ಪಾಲಿಸುವದರ ಜೊತೆಗೆ ಅಗತ್ಯವಿದ್ದಲ್ಲಿ ಸೈನ್ಯ ಮತ್ತು ಆಡಳಿತದ ಜೊತೆಗೆ ಸಿದ್ಧರಾಗುವ ಮೂಲಕ ರಾಷ್ಟ್ರಭಕ್ತಿ ಪ್ರದರ್ಶಿಸಬೇಕೆಂದು ಹೇಳಿದರು.