ಸಾರಿಗೆ ಸಂಸ್ಥೆಯ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಲಿಂಗಸುಗೂರು: ಹೆಚ್ಚುವರಿ ಕರ್ತವ್ಯದ ಒತ್ತಾಯದ ಸೂಚನೆಗೆ ಬೇಸತ್ತು ಸಾರಿಗೆ ಸಂಸ್ಥೆಯ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಲಿಂಗಸುಗೂರು ಘಟಕದಲ್ಲಿ ನಡೆದಿದೆ.
ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ ಚಾಲಕ ಅಬ್ದುಲ್ ಎಂದು ಗುರುತಿಸಲಾಗಿದೆ. ಘಟಕದ ಸಿಬ್ಬಂದಿ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲು ಸಲಹೆ ನೀಡಿದ್ದಾರೆ.
ಲಿಂಗಸಗೂರು ಸಾರಿಗೆ ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುರುವಾರ ಕಾರ್ಯನಿರ್ವಹಿಸಿ ಮರಳಿ ಘಟಕಕ್ಕೆ ಬಂದಾಗ ಪುನಃ ಹೆಚ್ಚುವರಿ ಕರ್ತವ್ಯಕ್ಕೆ (ಡಬಲ್ ಡ್ಯೂಟಿ)ಗೆ ಹೋಗುವಂತೆ ಸಾರಿಗೆ ಘಟಕ ವ್ಯವಸ್ಥಾಪಕ ರಾಹುಲ್ ವನಸೂರೆ ಸೂಚಿಸಿದಾಗ ಚಾಲಕ ಅಬ್ದುಲ್ ನಾನು ಈಗಾಗಲೇ ಕರ್ತವ್ಯ ಮುಗಿಸಿ ಬಂದಿದ್ದೇನೆ. ಪುನಃ ರಾತ್ರಿ ಡ್ಯೂಟಿಗೆ ಒಬ್ಬನೆ ಹೋಗಲು ಆಗುವುದಿಲ್ಲವೆಂದು ತಿಳಿಸಿದಾಗ ಇಬ್ಬರ ಮಧ್ಯೆ ವಾಗ್ವಾದ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಬ್ದುಲ್ ಮಾತನಾಡಿ, ನನಗೆ ಈಗಾಗಲೆ ಹೆಚ್ಚಿನ ವಯಸ್ಸಾಗಿದ್ದು ಹೆಚ್ಚುವರಿ ಕರ್ತವ್ಯ(ಡಬಲ್ ಡ್ಯೂಟಿ) ನಿರ್ವಹಿಸಲು ಸಾಧ್ಯವಾಗುವುದಿಲ್ಲವೆಂದು ಹೇಳಿದ್ದಕ್ಕೆ ವ್ಯವಸ್ಥಾಪಕ ವನಸೂರೆಯವರು ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ನಾನು ರಜೆ ಪಡೆಯದೇ ಕೆಲಸ ಮಾಡಿದ್ದು ಪುನಃ ರಾತ್ರಿ ಕರ್ತವ್ಯಕ್ಕೆ ಹೋಗುವಂತೆ ಸೂಚಿಸಿದ್ದು ವಯಸ್ಸಾದ ನನಗೆ ಆಗುವುದಿಲ್ಲ ಎಂದು ಹೇಳಿದರೂ ಕೂಡ ನನ್ನ ಮೇಲೆ ಒತ್ತಡ ಹಾಕಿ ಡ್ಯೂಟಿಗೆ ಹೋಗಲೇಬೇಕೆಂದು ಒತ್ತಾಯಿಸಿದ್ದಾರೆ ಎಂದು ಹೇಳಿದ್ದಾರೆ.