ಸರ್ಕಾರಿ ಶಾಲೆ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್

0
101

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ `ಮಾತನಾಡುವ ಇಂಗ್ಲೀಷ್’ (ಸ್ಪೋಕನ್ ಇಂಗ್ಲೀಷ್) ತರಗತಿಗಳು ಆರಂಭವಾಗಲಿವೆ.
ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಳೆದ ವರ್ಷವೂ ಆಯ್ದ ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಆರಂಭಿಸಿತ್ತಾದರೂ ಅದು ಅಷ್ಟೇನೂ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಪ್ರಸಕ್ತ ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪೂರ್ಣಪ್ರಮಾಣದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ನಡೆಸಲು ನಿಶ್ಚಯಿಸಿದೆ. ಈ ಸಂಬಂಧ ಇಲಾಖೆಯು ಅತ್ಯುತ್ತಮ ಸಂಪನ್ಮೂಲವುಳ್ಳ ವ್ಯವಸ್ಥೆ ಜಾರಿಗೆ ಯೋಜನೆ ರೂಪಿಸಿದೆ.
ಇಲಾಖೆ ಕಳೆದ ವರ್ಷ ವಾರಾಂತ್ಯದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ನಡೆಸುವುದಕ್ಕೆ ಚಾಲನೆ ನೀಡಿತ್ತು. ರಿಜನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಸಂಸ್ಥೆಯು ಬೋಧಕರಿಗೆ ರಾಜ್ಯ ಮಟ್ಟದ ತರಬೇತಿ ನೀಡಲು ಸೂಚಿಸಲಾಗಿತ್ತು. ಆದರೆ, ಈ ಕಾರ್ಯಕ್ರಮ ಜಾರಿಯೇ ಆಗಿರಲಿಲ್ಲ.
ಇದೀಗ ಈ ಬಗ್ಗೆ ಎಚ್ಚೆತ್ತುಕೊಂಡಿರುವ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ವರ್ಷ ವ್ಯವಸ್ಥಿತವಾಗಿ ಯೋಜನೆ ಜಾರಿಗೆ ಮುಂದಡಿಯಿಟ್ಟಿದೆ. ಈ ಹೊಸ ಯೋಜನೆಯನ್ವಯ ವರ್ಷಕ್ಕೆ ೧೮೦ ಗಂಟೆಗಳ ಕಾಲ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದ್ದು ಈ ಯೋಜನೆಯು ಸರಿಸುಮಾರು ೧೦೦೦ ಶಾಲೆಗಳಲ್ಲಿ ಜಾರಿಗೆ ಬರಲಿದೆ. ವಿದ್ಯಾರ್ಥಿಗಳ ಸಾಂದ್ರತೆಗನುಗುಣವಾಗಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳೂ ಇವೆ.
ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಮಾತ್ರವಲ್ಲದೆ, ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲೂ ಸಹ ಈ ಯೋಜನೆ ಜಾರಿಗೆ ಬರಲಿದ್ದು ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ತೆಗೆದುಕೊಳ್ಳಲೆಂದೇ ವಿಶೇಷವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಇಲಾಖೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

Previous articleಪೂರ್ವ ಮುಂಗಾರು ಅಬ್ಬರ ಸಾಧ್ಯತೆ
Next articleಸಿಎಂ ಆಗಿ ನಾನು ಫೇಲ್ ಆಗಿದ್ದೇನೆ