ದಾವಣಗೆರೆಯಲ್ಲಿ ನಡೆದ ಶೋಷಿತರ ಪರ ಸಮಾಲೋಚನಾ ಸಭೆಯಲ್ಲಿ ಕೇಳಿ ಬಂದ ಅಹಿಂದ ಮುಖಂಡರ ಒತ್ತಾಯ
ದಾವಣಗೆರೆ: ಭವಿಷ್ಯದಲ್ಲಿ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವುದು, ಜಾತಿ ಗಣತಿ ಅನುಷ್ಠಾನ, ಅಹಿಂದ ಸಮುದಾಯ ಸಬಲೀಕರಣ, ಎಸ್ ಸಿ- ಎಸ್ ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳುವುದು ಸೇರಿದಂತೆ ವಿವಿಧ ವಿಷಯಗಳು ಭಾನುವಾರ ಶೋಷಿತರ ಪರ ಸಮಾಲೋಚನಾ ಸಭೆಯಲ್ಲಿ ಗಂಭೀರ ಚರ್ಚೆಗಳು ನಡೆದಿವೆ.
ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ಸಂಜೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಶೋಷಿತರ ಪರ ಸಮಾಲೋಚನೆ ಸಭೆಯಲ್ಲಿ ಈ ಎಲ್ಲಾ ಪ್ರಮುಖ ವಿಷಯಗಳು ಮುನ್ನೆಲೆಗೆ ಬಂದಿವೆ ಎಂದು ಹೇಳಲಾಗಿದೆ.
ಅಹಿಂದ ಸಮುದಾಯಗಳು ಸಂಘಟಿತರಾದಾಗ ಮಾತ್ರ ರಾಜಕೀಯ ಕ್ಷೇತ್ರದಲ್ಲಿ ಅಹಿಂದ ಮುಖಂಡರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನಗಳು ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಕೆಳಮಟ್ಟದಿಂದಲೇ ಅಹಿಂದ ಸಮುದಾಯಗಳು ಸಂಘಟಿತ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ. ಸಂದರ್ಭ ಬಂದಾಗ ಬಲಪ್ರದರ್ಶಿಸುವ ಮೂಲಕ ನಮ್ಮ ಹಕ್ಕು ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಅಹಿಂದ ಮುಖಂಡರು ಸಭೆಯಲ್ಲಿ ಪ್ರಾಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಕಾಂಗ್ರೆಸ್ ಸರ್ಕಾರವೇ ಆಯೋಗ ರಚಿಸಿ ಸಮೀಕ್ಷೆಯನ್ನು ಪೂರ್ಣಗೊಂಡು, ಆ ಸಮೀಕ್ಷೆಯ ವರದಿ ಸ್ವೀಕರಿಸಿ, ಈಗ ಆ ವರದಿ ಅನುಷ್ಠಾನಗೊಳಿಸಲು ಸರ್ಕಾರ ಮೀನಾಮೇಷ ಮಾಡುತ್ತಿದೆ. ಕೂಡಲೇ ಸರ್ಕಾರ ಜಾತಿ ಗಣತಿ ವರದಿಯನ್ನು ಅನುಷ್ಠಾನಗೊಳಿಸಬೇಕೆಂದು ಸಭೆಯಲ್ಲಿ ಅಹಿಂದ ಮುಖಂಡರು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಒತ್ತಡ ಹಾಕಿದ್ದಾರೆ ಎಂದು ಹೇಳಲಾಗಿದೆ.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಮುಂದಿನ ವಿಧಾನಸಭಾ, ಲೋಕಸಭಾ ಚುನಾವಣೆ ವೇಳೆಗೆ ಈಗಿನಿಂದಲೇ ಅಹಿಂದ ಸಮುದಾಯಗಳಲ್ಲಿನ ಪ್ರಬಲ ನಾಯಕರನ್ನು ಹುಟ್ಟು ಹಾಕುವ ಮೂಲಕ ಅವರು ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲಿಸುವ ವಾತಾವರಣ ನಿರ್ಮಾಣ ಮಾಡಬೇಕಾಗಿದೆ ಎಂದು ಕಳೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತಗೊಂಡ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಅಹಿಂದ ಮುಖಂಡರಿಗೆ ಸಲಹೆ ನೀಡಿದರು ಎಂದು ತಿಳಿದು ಬಂದಿದೆ.
ಚುನಾವಣೆಗಳಲ್ಲಿ ಅತಿ ಹೆಚ್ಚು ಅಹಿಂದ ಸಮುದಾಯಗಳ ನಾಯಕರು ಆಯ್ಕೆ ಆದ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳು ಅವರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡುವ ವೇಳೆ ಅವರನ್ನು ಪರಿಗಣಿಸದಿದ್ದರೆ, ಆಗ ಅಹಿಂದ ಸಮುದಾಯಗಳು ಅವರಿಗೆ ಸೂಕ್ತ ಸ್ಥಾನಮಾನಗಳು ಸಿಗುವವರೆಗೂ ಅವರ ಪರ ದ್ವನಿ ಎತ್ತಿ ನಿಲ್ಲುವ ಗಟ್ಟಿತನ ತೋರಬೇಕೆಂದು ಕೆಲವು ಅಹಿಂದ ಮುಖಂಡರು ಸಲಹೆ ನೀಡಿದರು ಎಂದು ಹೇಳಲಾಗಿದೆ.
ಬಿ.ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಅಹಿಂದ ಮುಖಂಡರಾದ ಹೊದಿಗೆರೆ ರಮೇಶ್, ಡಿ.ಬಸವರಾಜ್, ಅನಂತನಾಯ್ಕ್, ಅನಿಫ್ ಭಾಷಾ, ಪ್ರೊ.ಎ.ಬಿ.ರಾಮಚಂದ್ರಪ್ಪ, ಆವರೆಗೆರೆ ಚಂದ್ರು, ಟಿ.ಅಜ್ಗರ್, ನಿವೃತ್ತ ಎಸ್ಪಿಗಳಾದ ರವಿನಾರಾಯಣ, ಎನ್.ರುದ್ರಮುನಿ ಹಾಗೂ ಹಾಲುಮತ ಸಮಾಜ, ಕುರುಬ ಸಮಾಜ, ಸವಿತಾ ಸಮಾಜ ಸೇರಿದಂತೆ ಅಹಿಂದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.