ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರಿಗೆ ಅಪಘಾತ ಸಂಭವಿಸಿದ ‘ಹಿಟ್ ಅಂಡ್ ರನ್’ ಪ್ರಕರಣದಲ್ಲಿ ಕಿತ್ತೂರ ಪೊಲೀಸರು ತೀವ್ರ ಕಾರ್ಯಾಚರಣೆಯೊಂದಿಗೆ ಅಪಘಾತಕ್ಕೀಡಾದ ಟ್ರಕ್ ಮತ್ತು ಅದರ ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
೨೦೨೫ರ ಜನವರಿ ೧೪ರಂದು ಧಾರವಾಡ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ೪೮ರ ಅಂಬಡಗಟ್ಟಿ ಕ್ರಾಸ್ ಹತ್ತಿರ ಸಚಿವೆಯ ಇನ್ನೋವಾ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿತ್ತು. ನಂತರ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಚಿವೆಯೂ ಸೇರಿ ಕಾರಿನಲ್ಲಿ ಇದ್ದ ಹಲವರಿಗೆ ಗಾಯಗಳಾಗಿತ್ತು. ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ಸಚಿವರ ಚಾಲಕ ಶಿವಪ್ರಸಾದ್ ನೀಡಿದ ದೂರಿನ ಮೇರೆಗೆ ಕಿತ್ತೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹಿರೇಬಾಗೇವಾಡಿ ಟೋಲ್ ನಾಕಾ ಮತ್ತು ಅಂಬಡಗಟ್ಟಿಯ ಧಾಬಾ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು ಮಹಾರಾಷ್ಟ್ರದ ಪುಣೆ ಜಿಲ್ಲೆ ಇಂದಾಪೂರ ತಾಲ್ಲೂಕು ತಕ್ರಾರವಾಡಿಯ ೬೫ ವರ್ಷದ ಟ್ರಕ್ ಚಾಲಕ ಮಧುಕರ ಕೊಂಡಿರಾಮ ಸೋಮವಂಶಿ(೬೫)ಯನ್ನು ಬಂಧಿಸಿದ್ದಾರೆ.
ಎಫ್‌ಎಸ್‌ಎಲ್ ತಜ್ಞರಿಂದ ವಾಹನದ ಪರಿಶೀಲನೆ ನಡೆಸಿ, ಬಣ್ಣದ ಮಾದರಿಗಳಾದ ಸಾಬೀತುಗಳನ್ನು ಪರಿಶೀಲಿಸಿ, ಘಟನೆಯ ದಿನದ ಮೊಬೈಲ್ ಕರೆಗಳ ದಾಖಲೆಗಳ ಆಧಾರದಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಳಿಕ ಆರೋಪಿಗೆ ಜಾಮೀನು ನೀಡಲಾಗಿದೆ.
ಈ ಕಾರ್ಯಾಚರಣೆ ಡಿಎಸ್‌ಪಿ ರವಿ ಡಿ.ನಾಯ್ಕ, ಸಿಪಿಐ ಶಿವಾನಂದ ಗುಡಗನಟ್ಟಿ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಪ್ರವೀಣ ಗಂಗೋಳ, ಪ್ರವೀಣ ಕೋಟಿಯವರ ನೇತೃತ್ವದಲ್ಲಿ ನಡೆಯಿತು. ಈ ಪತ್ತೆ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶೃತಿ ಎಚ್.ಎಸ್ ಹಾಗೂ ಆರ್.ಬಿ ಬಸರಗಿ ಶ್ಲಾಘಿಸಿದ್ದಾರೆ.