Home ತಾಜಾ ಸುದ್ದಿ ಸಂಪುಟದಿಂದ ಅಮಿತ್ ಶಾ ವಜಾಗೊಳಿಸಲು ಆಗ್ರಹ

ಸಂಪುಟದಿಂದ ಅಮಿತ್ ಶಾ ವಜಾಗೊಳಿಸಲು ಆಗ್ರಹ

0

ದಾವಣಗೆರೆ: ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಪಮಾನ ಮಾಡಿರುವ ಅಮಿತ್ ಶಾ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕೆಂದು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ಆಗ್ರಹಿಸಿದ್ದಾರೆ.
ಮಂಗಳವಾರ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಕುರಿತು ಸದನದಲ್ಲಿ ಆರೋಗ್ಯಕರ ಚರ್ಚೆ ಏರ್ಪಡಿಸಿದ ಸಂದರ್ಭದಲ್ಲಿ ಅಮಿತ್ ಶಾ ಅವರು ಅಂಬೇಡ್ಕರ್ ಅವರಿಗೆ ಅಪಮಾನವಾಗುವ ರೀತಿ ಹೇಳಿಕೆ ನೀಡಿರುವುದು ಖಂಡನೀಯ. ಆದ್ದರಿಂದ ಕೂಡಲೇ ಅವರು ಬಹಿರಂಗವಾಗಿ ಕ್ಷಮೆಯಾಚಿಸಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಭಾರತಕ್ಕೆ ಸಂವಿಧಾನವೆಂಬ ಧರ್ಮ ಗ್ರಂಥವನ್ನು ನೀಡಿರುವ ಅಂಬೇಡ್ಕರ್ ಅವರನ್ನು ದೇಶದ ಜನತೆ ಗೌರವದಿಂದ ಕಾಣುತ್ತಾರೆ. ಆದರೆ, ಗೃಹ ಸಚಿವರು ಅಂಬೇಡ್ಕರ್ ಎಂದು ಜಪ ಮಾಡುವ ಬದಲಿಗೆ ದೇವರನ್ನು ಸ್ತುತಿಸಿದರೆ ದೇವರು ಒಲಿಯುತ್ತಿದ್ದ ಎಂದು ಲೇವಡಿ ಮಾಡಿರುವ ಹೇಳಿಕೆ ಗಮನಿಸಿದರೆ ಬಿಜೆಪಿಯವರಿಗೆ ಅಂಬೇಡ್ಕರ್ ಬಗೆಗಿರುವ ಅಸಮಾಧಾನ ತಿಳಿಯುತ್ತದೆ ಎಂದು ಹೇಳಿದರು.
ಅಮಿತ್ ಶಾ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸಂಸದರಿಂದ ಸದನದಲ್ಲಿ ಎರಡು ದಿನಗಳ ಕಾಲ ಶಾಂತವಾಗಿ ಪ್ರತಿಭಟನೆ ನಡೆಸಲಾಯಿತು. ಆದರೆ ಬಿಜೆಪಿಯವರು ಕೋಲುಗಳನ್ನೆಲ್ಲ ಸದನದ ಒಳಗೆ ತಂದು ಪ್ರತಿಭಟನೆ ನಡೆಸುತ್ತಾರೆಂದರೆ ಅವರು ಮೋದಿ ಇರುವವರೆಗೂ ತಮಗೆ ಯಾವುದೇ ಕಾನೂನು ಅನ್ವಯಿಸುವುದಿಲ್ಲ ಎಂದು ತಿಳಿದುಕೊಂಡಿದ್ದಾರೆ ಎಂದರು.
ಎಐಸಿಸಿಯಿಂದ ಕಾಂಗ್ರೆಸ್ ಸಂಸದರಿರುವ ಕ್ಷೇತ್ರಗಳಲ್ಲಿ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸುವವರೆಗೂ ನಮ್ಮ ಹೋರಾಟ ನಡೆಸಬೇಕೆಂದು ಆದೇಶವಿರುವುದರಿಂದ ಇಂದು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಹೋರಾಟ ನಡೆಸಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಬಸವಂತಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಪಾಲಿಕೆ ಮೇಯರ್ ಚಮನ್ ಸಾಬ್, ಮಾಜಿ ಮೇಯರ್ ಅನಿತಾ ಜಾಧವ್, ಶ್ರೀನಿವಾಸ್, ಬಿ.ಹೆಚ್. ವೀರಭದ್ರಪ್ಪ ಸೇರಿದಂತೆ ಮತ್ತಿತರರು ಇದ್ದರು‌.

Exit mobile version