ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆಯು ಕಲ್ಯಾಣ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಕೇವಲ ಘೋಷಣೆಯಾಗಿಯೇ ಉಳಿದಿದೆ ಮತ್ತು ಬೆಂಗಳೂರಿನ ರಸ್ತೆಗಳು ಜಾಗತಿಕ ಮಟ್ಟದಲ್ಲಿ ನಗರದ ಮಾನವನ್ನು ಹರಾಜು ಹಾಕುತ್ತಿವೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಕಲ್ಯಾಣ ಕರ್ನಾಟಕದ ಗೋಳು ಕೇಳುವವರಾರು?: ಕಲ್ಯಾಣ ಕರ್ನಾಟಕ ಭಾಗದ ಸುಮಾರು 38 ಹಳ್ಳಿಗಳಿಗೆ ಇಂದಿಗೂ ಮೂಲಭೂತ ಸೌಕರ್ಯವಾದ ರಸ್ತೆಯೇ ಇಲ್ಲ. ಇದರಿಂದಾಗಿ ಸರ್ಕಾರಿ ಬಸ್ಸುಗಳು ಆ ಗ್ರಾಮಗಳಿಗೆ ಸಂಚರಿಸುತ್ತಿಲ್ಲ. ಈ ಗಂಭೀರ ಸಮಸ್ಯೆಯಿಂದಾಗಿ, ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆಯು ಅಲ್ಲಿನ ಮಹಿಳೆಯರ ಪಾಲಿಗೆ ಇಲ್ಲದಂತಾಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
“ಬೇರೆಲ್ಲಾ ವಿಷಯಗಳ ಬಗ್ಗೆ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ, ತಮ್ಮದೇ ಭಾಗದ ಜನರು ದುಪ್ಪಟ್ಟು ಹಣ ನೀಡಿ, ಟಂಟಂ ಮತ್ತು ಜೀಪುಗಳಂತಹ ಖಾಸಗಿ ವಾಹನಗಳಲ್ಲಿ ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುತ್ತಿರುವುದು ಕಾಣಿಸುತ್ತಿಲ್ಲವೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. “ಮತ ಪಡೆದು ಅಧಿಕಾರಕ್ಕೆ ಬಂದವರು, ತಮ್ಮ ಕುಟುಂಬದ ಕಲ್ಯಾಣ ಮಾಡಿಕೊಳ್ಳುವುದರಲ್ಲಿ ಮಾತ್ರ ನಿರತರಾಗಿದ್ದಾರೆ,” ಎಂದು ಖರ್ಗೆ ಕುಟುಂಬದ ವಿರುದ್ಧವೂ ಅಶೋಕ್ ನೇರ ವಾಗ್ದಾಳಿ ನಡೆಸಿದರು.
ವಿಫಲತೆ ಮರೆಮಾಚಲು ಆರ್ಎಸ್ಎಸ್ ಟೀಕೆ: ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ಮತ್ತು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಚಿವರು ಕೇವಲ ಆರ್‌ಎಸ್ಎಸ್ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಕಲ್ಯಾಣ ಕರ್ನಾಟಕದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದು, ಇನ್ನು ಮುಂದೆ ಖರ್ಗೆ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುವ ದಿನಗಳು ದೂರವಿಲ್ಲ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಟೆಕ್ ಸಮ್ಮಿಟ್‌ಗೆ ಗುಂಡಿಗಳ ಸ್ವಾಗತವೇ?: ಇದೇ ವೇಳೆ, ಬೆಂಗಳೂರಿನ ಮೂಲಸೌಕರ್ಯಗಳ ದುಸ್ಥಿತಿಯ ಬಗ್ಗೆಯೂ ಸರ್ಕಾರದ ಗಮನ ಸೆಳೆದ ಅಶೋಕ್, “ನವೆಂಬರ್‌ನಲ್ಲಿ ನಡೆಯಲಿರುವ ‘ಬೆಂಗಳೂರು ಟೆಕ್ ಸಮ್ಮಿಟ್’ಗೆ ವಿಶ್ವದಾದ್ಯಂತದ ಗಣ್ಯರು, ಹೂಡಿಕೆದಾರರು ಮತ್ತು ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಆಗಮಿಸಲಿದ್ದಾರೆ. ಅವರಿಗೆ ನಾವು ಹೊಂಡ-ಗುಂಡಿಗಳಿಂದ ತುಂಬಿದ, ಕಸದ ರಾಶಿಗಳಿಂದ ಕೂಡಿದ ರಸ್ತೆಗಳನ್ನು ತೋರಿಸಿ ಸ್ವಾಗತಿಸಬೇಕೇ?” ಎಂದು ಪ್ರಶ್ನಿಸಿದ್ದಾರೆ.
“ಕಳೆದ ಕೆಲವು ಸಮಯದಿಂದ ಬೆಂಗಳೂರಿನ ಮೂಲಸೌಕರ್ಯವನ್ನು ಸಂಪೂರ್ಣವಾಗಿ ಹಾಳುಗೆಡವಲಾಗಿದೆ. ಸಂಚಾರ ದಟ್ಟಣೆ ಹೆಚ್ಚಾಗಿದೆ ಮತ್ತು ಹೂಡಿಕೆದಾರರು ಬೇರೆ ರಾಜ್ಯಗಳತ್ತ ಮುಖ ಮಾಡುವಂತಾಗಿದೆ. ಈ ಕುರಿತು ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಪತ್ರ ಬರೆದು ರಸ್ತೆಗಳನ್ನು ಸರಿಪಡಿಸಲು ಒತ್ತಾಯಿಸುವರೇ ಎಂದು ಸವಾಲೆಸೆದಿದ್ದಾರೆ.
