ಹಾವೇರಿ(ಬ್ಯಾಡಗಿ): ವಿಶ್ವಾಸ ಹೆಚ್ಚಾದರೆ ವ್ಯಾಪಾರ ಹೆಚ್ಚಾಗುತ್ತದೆ. ವ್ಯಾಪಾರ ಹೆಚ್ಚಾದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬ್ಯಾಡಗಿ ಒಂದು ವಾಣಿಜ್ಯ ಕೇಂದ್ರವಾಗಿದೆ. ಆಂಧ್ರ ಪ್ರದೇಶ ರಾಯಚೂರು, ಧಾರವಾಡ ಜಿಲ್ಲೆಯ ಕುಂದಗೋಳದಿಂದ ಮೆಣಸಿನಕಾಯಿ ಇಲ್ಲಿಗೆ ಬರುತ್ತದೆ. ಬ್ಯಾಡಗಿಯೊಳಗ ಒಳ್ಳೆಯ ಸಂಪ್ರದಾಯ ಇದೆ. ಇಲ್ಲಿ ರೈತರ ಬೆಳೆಗೆ ಒಳ್ಳೆಯ ಬೆಲೆ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ಜನರಿಗೆ ಇದೆ ಎಂದು ಹೇಳಿದರು.
ಭಾರತ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ ಇಡಿ ಜಗತ್ತಿನ ಇತರ ರಾಷ್ಟ್ರಗಳಲ್ಲಿ ಶೇ 2ರಿಂದ ಶೇ 3ರಷ್ಟು ಬೆಳವಣಿಗೆ ಆಗುತ್ತಿದ್ದರೆ, ಭಾರತ ಶೇ 6ರಷ್ಟು ಬೆಳವಣಿಗೆ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ವ್ಯಾಪಾರವನ್ನು ನಡೆಸಲು ನಿಯಮಗಳನ್ನು ಸರಳೀಕರಣ ಮಾಡಿದ್ದಾರೆ. ಹತ್ತು ವರ್ಷಗಳ ಹಿಂದೆ 1 ಕೋಟಿ ಆದಾಯ ಘೋಷಣೆ ಮಾಡಿ ತೆರಿಗೆ ಕಟ್ಟುವ ಜನರ ಸಂಖ್ಯೆ ಕೇವಲ 42 ಸಾವಿರ ಇದ್ದರು. ಈಗ ಸುಮಾರು 5.5 ಲಕ್ಷಕ್ಕೂ ಹೆಚ್ಚು ಜನರು ತೆರಿಗೆ ಕಟ್ಟುತ್ತಿದ್ದಾರೆ. ವ್ಯಾಪಾರ ಹೆಚ್ಚಾದಾಗ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ. ವಿಶ್ವಾಸ ಹೆಚ್ಚಾದರೆ ವ್ಯಾಪಾರ ಹೆಚ್ಚಾಗುತ್ತದೆ. ನಮ್ಮ ವಿಶ್ವಾಸಾರ್ಹತೆಯೇ ನಮ್ಮ ಬಂಡವಾಳ. ಮೊದಲು ರೈತರ ಬಳಿ ಹೋಗಿ ಮೆಣಸಿನಕಾಯಿ ತರುತ್ತಿದ್ದರು. ಈಗ ರೈತರ ವಿಶ್ವಾಸಗಳಿಸಿರುವುದರಿಂದ ರೈತರು ಇಲ್ಲಿಗೆ ಬಂದು ಮಾರಾಟ ಮಾಡುತ್ತಾರೆ. ದೇಶದ ಆರ್ಥಿಕತೆ ವಿಶ್ವಾಸದ ಮೇಲೆ ನಿಂತಿದೆ ಎಂದು ಅಭಿಪ್ರಾಯಪಟ್ಟರು.
ಸಹಕಾರಿ ರಂಗದ ತಳಹದಿ ಅದರ ನೀತಿ ಯಾವಾಗಲೂ ಗಟ್ಟಿಯಾಗಿರುತ್ತದೆ. ಸಹಕಾರಿ ರಂಗದಲ್ಲಿ ಏನಾದರೂ ವ್ಯತ್ಯಾಸವಾದರೆ ಆಡಳಿತ ಮಂಡಳಿಯಲ್ಲಿ ಏನೋ ವ್ಯತ್ಯಾಸವಾಗಿದೆ ಎಂದು ಅರ್ಥ. ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಸಹಕಾರಿ ರಂಗ ಸರ್ಕಾರವನ್ನು ಆಳುತ್ತವೆ. ಸಹಕಾರಿ ರಂಗ ಅಷ್ಟು ಪ್ರಭಲವಾಗಿದೆ. ಕರ್ನಾಟಕದಲ್ಲಿ ಸರಕಾರ ಸಹಕಾರ ರಂಗವನ್ನು ಆಳುತ್ತಿದೆ. ಸರ್ಕಾರ ರೆಗ್ಯಲೇಟರಿ ಅಥಾರಿಟಿಯಾಗಿ ಕಾರ್ಯಮಾಡಬೇಕು ಎಂದು ಹೇಳಿದರು.