ಮಂಗಳೂರು: ಕರಾವಳಿಯಲ್ಲಿ ತಾಪಮಾನ ಏರಿಕೆಯಾಗುತ್ತಿರುವ ನಡುವೆಯೇ ದ.ಕ. ಜಿಲ್ಲೆಯ ವಿವಿಧೆಡೆ ಚಿಕನ್ ಪಾಕ್ಸ್(ಸಿಡುಬು) ಆತಂಕ ಎದುರಾಗಿದೆ. ಕಡಬ ತಾಲೂಕು ಒಂದರಲ್ಲೇ ವಿವಿಧ ಶಾಲೆಗಳ ೨೧ಕ್ಕೂ ಅಧಿಕ ಮಕ್ಕಳಿಗೆ ಚಿಕನ್ ಪಾಕ್ಸ್ ಕಾಣಿಸಿದೆ.
ನೆಲ್ಯಾಡಿಯಲ್ಲಿ ಎರಡು ಶಾಲೆಗಳಲ್ಲಿ ಒಟ್ಟು ಒಂಭತ್ತು ಮಕ್ಕಳಿಗೆ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆರು ಮಕ್ಕಳಿಗೆ, ಬೆಳ್ಳಾರೆ ಶಾಲೆಯಲ್ಲಿ ಒಂದು ಮಗುವಿಗೆ, ಲಾವತ್ತಡ್ಕದಲ್ಲಿ ಒಂದು ಮಗುವಿಗೆ, ಗೊಳಿತ್ತೊಟ್ಟುವಿನಲ್ಲಿ ಒಂದು ಮಗುವಿಗೆ ಸೇರಿದಂತೆ ಒಟ್ಟು ೨೧ ಮಕ್ಕಳಿಗೆ ಚಿಕನ್ ಪಾಕ್ಸ್ ಹರಡಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ರೋಗ ಹರಡಿರುವ ಶಾಲೆಗಳ ಆಡಳಿತ ಮಂಡಳಿಗೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಆದೇಶ ನೀಡಿದೆ. ರೋಗ ಕಡಿಮೆಯಾಗುವವರೆಗೂ ಮಕ್ಕಳಿಗೆ ರಜೆ ನೀಡುವಂತೆ ಮತ್ತು ಶಾಲೆಗೆ ಕಳುಹಿಸದಂತೆ ಶಾಲೆಗಳಿಗೆ ಮತ್ತು ಪೋಷಕರಿಗೆ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.