ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರು ಇನ್ಮುಂದೆ ವಿಮಾನ ಹೊರಡುವ ಕನಿಷ್ಠ ಮೂರು ಗಂಟೆ ಮುಂಚೆ ನಿಲ್ದಾಣದಲ್ಲಿ ಹಾಜರಾಗಬೇಕು ಎಂದು ಕೆಇಎ ಮನವಿ ಮಾಡಿದೆ.
ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆವಹಿಸಬೇಕು ಎಂಬ ಕೇಂದ್ರ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ಈ ಹೊಸ ನಿರ್ದೇಶನವನ್ನು ಹೊರಡಿಸಲಾಗಿದೆ. ದೇಶದೆಲ್ಲೆಡೆ ಭದ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಹೆಚ್ಚಿಸಲಾಗಿದೆ. ಪ್ರಯಾಣಕ್ಕೂ ಮುನ್ನ ಸುಗಮ ಚೆಕ್ ಇನ್, ಭದ್ರತೆ ಮತ್ತು ಸರಾಗ ಬೋರ್ಡಿಂಗ್ ಅನುಭವಕ್ಕಾಗಿ ಕನಿಷ್ಠ ಮೂರು ಗಂಟೆ ಮುನ್ನ ನಿಲ್ದಾಣ ತಲುಪುವಂತೆ ಪ್ರಯಾಣಿಕರಿಗೆ ಸಲಹೆ ನೀಡಲಾಗಿದೆ.
ಇದೇ ವೇಳೆ ಕೆಐಎ, ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಮುನ್ನ ವಿಮಾನ ಸೇವೆಗಳ ಅಪ್‌ಡೇಟ್ ಮಾಹಿತಿಯನ್ನು ಕೂಡ ಪರೀಕ್ಷಿಸುವಂತೆ ಕೋರಿದೆ. ಈ ಸಮಯದಲ್ಲಿ ಪರಿಸ್ಥಿತಿ ಅರ್ಥೈಸಿಕೊಂಡು ಸಹಕಾರ ನೀಡುವಂತೆ ತಿಳಿಸಿದೆ.