ವಿನಯ್‌ ಆತ್ಮಹತ್ಯೆ: ರಾಜಕೀಯ ಮಾಡೋದು ಸರಿಯಲ್ಲ

0
26

ಚಿಕ್ಕಮಗಳೂರು: ಕೊಡಗು ಜಿಲ್ಲೆಯ ವಿನಯ್ ಸೋಮಯ್ಯ (40) ಅವರ ಆತ್ಮಹತ್ಯೆ ದುರ್ಘಟನೆ. ಯಾರೇ ಆಗಲಿ ಸಾಯಬಾರದಿತ್ತು. ಈ ಬಗ್ಗೆ ತನಿಖೆಯಾಗಲಿ, ಇದರಲ್ಲಿ ಯಾರದೇ ತಪ್ಪಿದ್ದರು ಅವರಿಗೆ ತಕ್ಕ ಶಿಕ್ಷೆ ಆಗಬೇಕು, ಅವರ ಸಾವಿನಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ರಾಜ್ಯ ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅವರು ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ತನಿಖೆ ಮಾಡ್ತಾರೆ, ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ. ಪೊನ್ನಣ್ಣ, ಮಂಥರ್ ಗೌಡ ಮೇಲೆ ಕೇಸ್ ಅಂತಾರೆ, ಅದು ರಾಜಕೀಯ ಅಲ್ವಾ ಯಾರ ಮೇಲೆ ಏನು ಮಾಡಬೇಕು ಪೊಲೀಸರಿಗೆ ಗೊತ್ತು, ಅವರು ಮಾಡ್ತಾರೆ ಯಾರೇ ಆಗಲಿ ಪಾಪ, ಸಾಯಬಾರದಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಶಾಸಕರಾದ ಎ.ಎಸ್‌. ಪೊನ್ನಣ್ಣ ಹಾಗೂ ಡಾ. ಮಂಥರ್‌ಗೌಡ ಅವರು ವಿನಯ್‌ ಸೋಮಯ್ಯ ಅವರೊಟ್ಟಿಗೆ ಸಂಪರ್ಕದಲ್ಲಿ ಇದ್ರಾ, ವಿನಯ್‌ ಸೋಮಯ್ಯ ವಿರುದ್ಧ ದೂರು ನೀಡಿದ್ದಾರೆ, ಎಫ್‌ಐಆರ್‌ ಆಗಿತ್ತು, ನಂತರ ಅವರಿಗೆ ಜಾಮೀನು ಸಿಗುತ್ತಿತ್ತು. ಈ ವಿಷಯದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಸರಿಯಲ್ಲ. ಈ ಪ್ರಕರಣದ ಬಗ್ಗೆ ತನಿಖೆಯಾಗಲಿ, ಬೊಪಯ್ಯ ಅವರನ್ನು ಸೋಲಿಸಿದ್ದರಿಂದ ಪೊನ್ನಣ್ಣನವರ ಮೇಲೆ ಸಿಟ್ಟಿದೆ. ಇದನ್ನು ಈ ರೀತಿಯಲ್ಲಿ ತೀರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಿನಯ್‌ ಸೋಮಯ್ಯ ಬಿಜೆಪಿಯ ದೊಡ್ಡ ನಾಯಕರು ಆಗಿದ್ರಾ, ಕೊಡಗಿನಲ್ಲಿ ಅಂತಹ ನಾಯಕರನ್ನು ನೋಡಿಲ್ಲಾ, ಯಾವ ವಿಷಯಕ್ಕೆ ಸತ್ತಿದ್ದಾರೆ, ಸಾವಿನ ಹೆಣದ ಮೇಲೆ ರಾಜಕೀಯ ಮಾಡಬಾರದು. ತನಿಖೆ ಮಾಡಲೀ, ಯಾರೇ ಆಗಲೀ ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಇವರಿಗೆ ತಾಳ್ಮೆ ಇಲ್ವಾ ಎಂದು ಕಿಡಿಕಾರಿದರು.
ಡಿವೈಎಸ್ಪಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ನನ್ನ ತಲೆಗೆ ಸುತ್ತಲು ಇದೇ ಬಿಜೆಪಿಯವರು ಯತ್ನಿಸಿದ್ದರು. ವಿನಾ ಕಾರಣ ಆರೋಪ ಮಾಡಿದ್ದರಿಂದ ನನ್ನ ಕುಟುಂಬದವರು ಮಾನಸಿಕವಾಗಿ ನೋವು ಅನುಭವಿಸಿದರು. ಈ ರೀತಿಯ ರಾಜಕೀಯ ಪ್ರೇರಿತ ಆರೋಪ ಮಾಡಬಾರದು ಎಂದು ಬಿಜೆಪಿಗೆ ಕಿವಿ ಮಾತು ಹೇಳಿದರು.

Previous articleಕಾಂಗ್ರೆಸ್ ಆಡಳಿತದಲ್ಲಿ ಸಾರ್ವಜನಿಕರು ಬೀದಿಗಿಳಿದರೆ ಮಾತ್ರ ಸ್ಪಂದನೆ
Next articleವ್ಯಾಪಾರ ಹೆಚ್ಚಾದಾಗ ದೇಶದ ಅಭಿವೃದ್ಧಿ ಸಾಧ್ಯ