ಬೆಂಗಳೂರು: ಕರ್ನಾಟಕದ ಭಾಷೆ, ಸಂಸ್ಕೃತಿ ಹಾಗೂ ಇತಿಹಾಸದ ಪ್ರತಿಬಿಂಬ ಹಾಗೂ ನಾಡಿನ ಸಂಕೇತವಾದ ಭುವನೇಶ್ವರಿಯ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ೨೩ ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನಸೌಧದ ಆವರಣದಲ್ಲಿ ಈಗಾಗಲೇ ಹಲವಾರು ಮಹನೀಯರ ಪ್ರತಿಮೆಗಳು ಇವೆ. ಕೆಂಗಲ್ ಹನುಮಂತಯ್ಯ ಪ್ರತಿಮೆ ರಸ್ತೆಯ ಬಳಿ ಇರುವ ವಿಶಾಲವಾದ ಜಾಗದಲ್ಲಿ ಭುವನೇಶ್ವರಿ ಪ್ರತಿಮೆಯನ್ನು ಸ್ಥಾಪಿಸಲು ಕೂಡಲೇ ಕಾಮಗಾರಿ ಆರಂಭಿಸಲು ತೀರ್ಮಾನಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಕೆಂಪೇಗೌಡ ಪ್ರತಿಮೆ ಮಾದರಿಯಲ್ಲೇ ಥೀಮ್ ಪಾರ್ಕ್ ಸಹಿತ ಭುವನೇಶ್ವರಿ ಪ್ರತಿಮೆ ನಿರ್ಮಾಣಗೊಳ್ಳಲಿದೆ. ಕರ್ನಾಟಕ ಏಕೀಕರಣ ೫೦ ವರ್ಷಗಳ ಸ್ಮರಣೆಗಾಗಿ ಈ ತೀರ್ಮಾನ ಮಾಡಲಾಗಿದೆ ಎಂದರು.