ವಕ್ಫ್‌ ತಿದ್ಧುಪಡಿ ಮಸೂದೆ ಸಂವಿಧಾನ ವಿರೋಧಿ: ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ

0
45

ಮಂಗಳೂರು: ಕೇಂದ್ರ ಸರ್ಕಾರ ಅಂಗೀಕರಿಸಿರುವ ವಕ್ಫ್‌ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿಯಾಗಿದ್ದು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಯಾರನ್ನೂ ಗಮನಕ್ಕೆ ತೆಗೆದುಕೊಳ್ಳದೆ ಕೇಂದ್ರ ಸರ್ಕಾರ ವಕ್ಫ್‌ ವಿಚಾರದಲ್ಲಿ ದಬ್ಬಾಳಿಕೆ ನಡೆಸುತ್ತಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ ಜಾರಿ ವಿಚಾರದಲ್ಲಿ ವಕ್ಫ್‌ನಲ್ಲಿ ತಪ್ಪಾಗಿದ್ದರೆ ಅಥವಾ ಭೂಮಿ ದುರುಪಯೋಗ ಆಗಿದ್ದರೆ ಸರಿ, ಆದರೆ ಕಾನೂನಿಗೆ ಅದಕ್ಕೂ ಸಂಬಂಧ ಇಲ್ಲ. ಈ ಕಾನೂನು ಸಂವಿಧಾನ ವಿರೋಧಿಯಾಗಿದೆ. ವಕ್ಫ್‌ ವಿಚಾರ ಸೂಕ್ಷ್ಮವಾಗಿದ್ದು, ಇದರಲ್ಲಿ ದ್ವೇಷ ಸಾಧಿಸುವಂಥದ್ದು ಸರಿಯಲ್ಲ. ರಾಜ್ಯದ ಭೂಮಿಯಲ್ಲಿ ಹಿಂದೂ ಧರ್ಮದ ಟ್ರಸ್ಟ್‌ಗಳು ಕೂಡ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಇದೆ. ವಕ್ಫ್ ಕೂಡ ಕೆಲವು ರಾಜ್ಯ ಸರ್ಕಾರ ವ್ಯಾಪ್ತಿಯಲ್ಲಿ ಇದೆ. ಇಂತಹ ಕ್ರಮಗಳು ಭ್ರಷ್ಟಾಚಾರದಿಂದ ಕೂಡಿದೆ ಎಂದು ಆರೋಪಿಸಿದರು.
ಕೋವಿಡ್ ಅಕ್ರಮದ ಬಗ್ಗೆ ನ್ಯಾ.ಡಿ.ಕುನ್ನಾ ವರದಿ ಬಗ್ಗೆ ಮಾತನಾಡಿದ ಸಚಿವ ದಿನೇಶ್‌ ಗುಂಡೂರಾವ್‌, ಈ ಬಗ್ಗೆ ಉಪಸಮಿತಿಯಲ್ಲಿ ಚರ್ಚೆಗಳಾಗಿದೆ. ಇಲಾಖೆಗಳಲ್ಲಿ ವಿಚಾರಣೆ ಮಾಡಲು ಹೇಳಿದ್ದೇನೆ. ವಿಚಾರಣೆ ಪೂರ್ಣಗೊಂಡ ಬಳಿಕ ಸ್ಪಷ್ಟ ಚಿತ್ರಣ ಲಭಿಸುತ್ತದೆ. ಕೋವಿಡ್‌ ಅಕ್ರಮದ ತನಿಖೆಯನ್ನು ಎಸ್‌ಐಟಿಗೂ ವಹಿಸಲಾಗಿದೆ. ಆರೋಗ್ಯ ಇಲಾಖೆಯಲ್ಲಿ ಶೋಕಾಸ್ ನೊಟೀಸ್ ನೀಡಿ ವಿಚಾರಣೆ ನಡೆಸಲಾಗಿದೆ. ಎಲ್ಲ ವಿಚಾರಣೆ ನಂತರ ಮುಂದಿನ ಕ್ರಮದ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಮಡಿಕೇರಿ ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣದ ಬಗ್ಗೆ ನನಗೆ ಪೂರ್ತಿ ಮಾಹಿತಿ ಇಲ್ಲ, ಮಾಹಿತಿ ತಿಳಿದು ಪ್ರತಿಕ್ರಿಯೆ ನೀಡುತ್ತೇನೆ. ಯಾವುದೇ ಪ್ರಕರಣ ಕಾನೂನು ಪ್ರಕಾರವೇ ಮುಂದುವರಿಯಬೇಕು. ಎಲ್ಲವನ್ನೂ ಕಾನೂನಿನ ಅಡಿಯಲ್ಲೇ ಮಾಡಬೇಕಾಗುತ್ತದೆ. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವಂಥದ್ದು ಏನೂ ಇಲ್ಲ. ಇವೆಲ್ಲಾ ಗಂಭೀರ ಮತ್ತು ಸೂಕ್ಷ್ಮವಾದ ವಿಷಯಗಳು, ಒಂದೇ ಸಮನೆ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ ಎಂದರು.

Previous articleವಿನಯ್ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ವಿಜಯೇಂದ್ರ ಒತ್ತಾಯ
Next articleಕಾಂಗ್ರೆಸ್ ಆಡಳಿತದಲ್ಲಿ ಸಾರ್ವಜನಿಕರು ಬೀದಿಗಿಳಿದರೆ ಮಾತ್ರ ಸ್ಪಂದನೆ