ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಮುಸ್ಲಿಂ ಬಂಧುಗಳು ಬೀದಿಗಿಳಿದಿದ್ದಾರೆ. ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್‌ನಲ್ಲಿ ಇಂದು ಸಂಜೆ ನಡೆದ ಪ್ರತಿಭಟನಾ ಸಮಾವೇಶಕ್ಕೆ ವಿವಿಧ ಕಡೆಗಳಿಂದ ಜನಸಾಗರ ಹರಿದು ಬಂದಿದೆ.
ಬಿಸಿಲ ಝಳದ ನಡುವೆಯೂ ಸುಮಾರು 60 ಸಾವಿರಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸಮಾವೇಶದಿಂದಾಗಿ ಮಧ್ಯಾಹ್ನದಿಂದಲೇ ಹೆದ್ದಾರಿಯುದ್ದಕ್ಕೂ ವಾಹನ ಸಂಚಾರ ನಿಧಾನಗತಿಯಲ್ಲಿ ಸಂಚರಿಸಿದೆ. ವಿವಿಧ ಕಡೆಗಳಲ್ಲಿ ಮಧ್ಯಾಹ್ನದಿಂದ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಶುಭ ಶುಕ್ರವಾರವೂ ಆಗಿದ್ದರಿಂದ ಮಧ್ಯಾಹ್ನದ ವೇಳೆ ನಗರದೆಲ್ಲೆಡೆ ವಾಹನಗಳ ಸಂಚಾರವೂ ಬಹುತೇಕವಾಗಿ ವಿರಳವಾಗಿತ್ತು. ನಗರ ಹಾಗೂ ಅಡ್ಯಾರ್ ಮೈದಾನದ ಸುತ್ತಮುತ್ತಲಿನ ಪ್ರದೇಶಗಳ ಜಂಕ್ಷನ್, ಕ್ರಾಸಿಂಗ್ ಪ್ರದೇಶಗಳಲ್ಲಿ ಪೊಲೀಸ್ ಬಿಗು ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿತ್ತು. ಪ್ರತಿಭಟನಾ ಸ್ಥಳದಲ್ಲಿ ಸೇರಿದ್ದವರು ಆಝಾದಿ ಘೋಷಣೆಗಳನ್ನು ಕೂಗುತ್ತಾ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಡ್ರೋಣ್ ಕಣ್ಗಾವಲು.. ವಾಗ್ವಾದ..
ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದ ಕಾರಣ ಮೊಬೈಲ್ ನೆಟ್‌ವರ್ಕ್ ಬಹುತೇಕವಾಗಿ ಜಾಮ್ ಆಗಿದ್ದು, ಸಂಪರ್ಕ, ಸಂವಹನಕ್ಕೆ ಅಡ್ಡಿಯಾಯಿತು. ಸಮಾವೇಶದ ಪ್ರತಿ ಹಂತದ ಚಿತ್ರೀಕರಣಕ್ಕೆ ವೀಡಿಗ್ರಾಫರ್‌ಗಳನ್ನು ನಿಯೋಜಿಸಲಾಗಿತ್ತು, ಭದ್ರತೆಯ ದೃಷ್ಟಿಯಿಂದ ಡ್ರೋನ್ ಮೂಲಕ ಕಣ್ಗಾವಲೂ ಇರಿಸಲಾಗಿತ್ತು. ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಚಾರಕ್ಕೆ ಪ್ರತಿಭಟನೆಯಲ್ಲಿ ಸೇರಿದ ಕೆಲವರ ಗುಂಪು ಅಡ್ಡಿ ಮಾಡಲು ಯತ್ನಿಸಿತು. ಈ ವೇಳೆ ತಡೆಯಲು ಬಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವದ ನಡೆದು. ಪ್ಲಾಸ್ಟಿಕ್ ಬಾಟಲಿಗಳನ್ನು ಪೊಲೀಸರ ಮೇಲೆ ಎಸೆಯಲಾಯಿತು. ಈ ಘಟನೆ ಹೊರತುಪಡಿಸಿದರೆ ಉದ್ರೇಕಕಾರಿ ಘೋಷಣೆ, ಭಾಷಣಗಳಿಲ್ಲದೆ ಶಾಂತಿಯುತ ಪ್ರತಿಭಟನೆ ನಡೆಯಿತು.
ರಾಷ್ಟ್ರ ಧ್ವಜ ಹಾರಾಟ:
ಸಮಾವೇಶದ ಮೈದಾನದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸಮೂಹ ಸೇರಿತ್ತು. ಅಲ್ಲಲ್ಲಿ ರಾಷ್ಟ್ರ ಧ್ವಜದ ಹಾರಾಟ ನಡೆಯಿತು.

























