ಲಂಚ: ಖಜಾನೆ ಲೆಕ್ಕಿಗ, ಸಿಬ್ಬಂದಿ ಲೋಕಾ ಬಲೆಗೆ

0
12

ಮಂಗಳೂರು: ಬಂಟ್ವಾಳ ತಾಲೂಕಿನ ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಹಾಗೂ ಎಫ್.ಡಿ.ಎ. ಸಿಬ್ಬಂದಿ ಬಸವೇಗೌಡ ಬಿ.ಎನ್. ಅವರು ಮರಣ ಉಪದಾನಕ್ಕೆ ಸಂಬಂಧಿಸಿದಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ.
ಮೇ 14ರಂದು ದೂರುದಾರರಿಂದ ಇಬ್ಬರೂ ಬೇಡಿಕೆ ಇಟ್ಟಿದ್ದ 5 ಸಾವಿರ ರೂ. ಲಂಚ ಸ್ವೀಕರಿಸುವ ಸಂದರ್ಭ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ದೂರುದಾರರ ಗಂಡ, ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್‌ವೊಂದರಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ಸಲ್ಲಿಸಿದ್ದು, 2023ರ ಅಕ್ಟೋಬರ್‌ನಲ್ಲಿ ನಿವೃತ್ತರಾಗಿದ್ದರು. ನಂತರ 2024ರ ಜೂನ್‌ನಲ್ಲಿ ಅವರು ನಿಧನರಾದರು. ದೂರುದಾರೆ ತನ್ನ ಗಂಡನ ಮರಣೋಪದಾನಕ್ಕಾಗಿ ಖಜಾನೆ ಅಧಿಕಾರಿಗಳಲ್ಲಿ ವಿಚಾರಿಸಿದಾಗ, ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಮತ್ತು ಎಫ್.ಡಿ.ಎ. ಬಸವೇಗೌಡ ಅವರು 10 ಸಾವಿರ ರೂ. ಲಂಚವನ್ನು ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಹಾಗೂ ಬಂಟ್ವಾಳ ಖಜಾನೆಯ ಎಫ್.ಡಿ.ಎ ಬಸವೇಗೌಡ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರ ವಿರುದ್ಧ ಲಂಚ ವಿರೋಧಿ ಕಾಯ್ದೆ ಮತ್ತು ಸೇವಾ ನಿಯಮಗಳ ಉಲ್ಲಂಘನೆಯ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಹಣದ ಸಾಕ್ಷ್ಯಗಳೊಂದಿಗೆ ವಿವರವಾದ ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

Previous articleನಂದಳಿಕೆ ಬಾಲಚಂದ್ರ ರಾವ್ ಇನ್ನಿಲ್ಲ
Next articleವಿಧಾನಸಭಾ ಸ್ವೀಕರ್‌ಗಳ ರಾಷ್ಟ್ರೀಯ ಸಮಿತಿಗೆ ಖಾದರ್ ನೇಮಕ