ರಜೆ ಮೇಲೆ ಬಂದಿದ್ದ ಸೈನಿಕ ತುರ್ತು ಕರ್ತವ್ಯಕ್ಕೆ ಮರಳಿದ

ಅಫಜಲಪುರ: ಭಾರತದಲ್ಲಿ ಪದೇ ಪದೇ ಉಗ್ರದಾಳಿ ಮಾಡುವ ಮೂಲಕ ಜನರ ಜೀವದ ಜೊತೆಗೆ ಚೆಲ್ಲಾಟ ಆಡುತ್ತಿರುವ ಪಾಕಿಸ್ತಾನಕ್ಕೆ ಮತ್ತು ಅಲ್ಲಿನ ಉಗ್ರ ಸಂಘಟನೆಗಳಿಗೆ ಬಿಸಿ ಮುಟ್ಟಿಸಲು ಭಾರತೀಯ ಸೇನೆ ಆಪರೇಷನ್ ಸಿಂದೂರ್ ಹೆಸರಿನ ಕಾರ್ಯಾಚರಣೆಗೆ ಇಳಿದಿದ್ದು, ರಜೆ ಮೇಲೆ ಊರಿಗೆ ಬಂದಿದ್ದ ಸೈನಿಕ ತುರ್ತಾಗಿ ಪುನಃ ಕರ್ತವ್ಯಕ್ಕಾಗಿ ತೆರಳಿದರು.
ಅಫಜಲಪುರ ತಾಲೂಕಿನ ಅರ್ಜುಣಗಿ ತಾಂಡಾದ ನಿವಾಸಿಯಾಗಿರುವ ಕನ್ಯಾಕುಮಾರ ತಂದೆ ಹೀರಣಾ ಚವ್ಹಾಣ ಕಳೆದ 20 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ತಾಯಿಯ ಅನಾರೋಗ್ಯ ಮತ್ತು ಮೇ 19ಕ್ಕೆ ತಂಗಿಯ ಮದುವೆಯ ಕಾರಣದಿಂದ 1 ತಿಂಗಳು ರಜೆ ತೆಗೆದುಕೊಂಡು ತಾಂಡಾಗೆ ಬಂದಿದ್ದರು. ಆದರೆ ಭಾರತ ಪಾಕಿಸ್ತಾನದ ನಡುವಿನ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವ ಪರಿಣಾಮ ಸೇನೆಯಲ್ಲಿದ್ದವರನ್ನೆಲ್ಲಾ ವಾಪಸ್ ಕರೆಸಿಕೊಳ್ಳಲಾಗುತ್ತಿದ್ದ ಕಾರಣ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ ಎಂದು ಸೈನಿಕ ಕನ್ಯಾಕುಮಾರ ಚವ್ಹಾಣ ತಿಳಿಸಿದರು. ಕನ್ಯಾಕುಮಾರ ಅವರನ್ನು ಮನೆಯವರು ಹಾಗೂ ಸ್ನೇಹಿತರು ಗೌರವದಿಂದ ಕಳುಹಿಸಿಕೊಟ್ಟರು.