ಹುಬ್ಬಳ್ಳಿ: ಸತತ 50 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಯಾವತ್ತೂ ರಕ್ಷಣಾ ಕ್ಷೇತ್ರದ ಬಲವರ್ಧನೆಗೆ ಒತ್ತು ನೀಡಿಲ್ಲ. ಬದಲಾಗಿ ಈಗ ಭದ್ರತೆಯ ವಿಚಾರದಲ್ಲಿ ಯಡವಟ್ಟು ಹೇಳಿಕೆ ನೀಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಿಂದೂರ್ ಕಾರ್ಯಾಚರಣೆ ಕುರಿತು ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ ಹಾಗೂ ಇತರರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಲ್ಲ. ರಕ್ಷಣಾ ಸಾಮಗ್ರಿಗಳನ್ನು ತಯಾರು ಮಾಡುವ ಸಂಸ್ಥೆಗಳಿಗೂ ಹಣಕಾಸಿನ ನೆರವು ನೀಡಿರಲಿಲ್ಲ. ಆದರೆ, ಇಂದು ಭಾರತದ ಸೈನ್ಯ ಸ್ವಾವಲಂಬಿ, ಆತ್ಮನಿರ್ಭರವಾಗಿದೆ. ಇದನ್ನು ಸಹಿಸಲು ಕಾಂಗ್ರೆಸ್‌ಗೆ ಆಗುತ್ತಿಲ್ಲ. ಹೀಗಾಗಿ, ಅನಾವಶ್ಯಕ ಆರೋಪ ಮಾಡುತ್ತಿದೆ ಎಂದು ಹರಿಹಾಯ್ದರು.
ಈ ಹಿಂದೆ, ಸಿಎಂ ಸಿದ್ದರಾಮಯ್ಯ ಯುದ್ಧ ಯಾಕೆ ಬೇಕು ಎಂದಿದ್ದರು. ನಾನೇ ಬಾಂಬ್ ಕಟ್ಟಿಕೊಂಡು ಹೋಗುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದರು. ಸಿಎಂ, ಸಚಿವರು, ಶಾಸಕರು ತಲಾ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಹೀಗೆ ಮಾತನಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆಯೇ? ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಕಾಂಗ್ರೆಸ್ ಯಾವತ್ತೂ ದೇಶದ ಪರವಾಗಿಲ್ಲ ಎಂಬುದು ಜನರಿಗೂ ಖಾತರಿಯಾಗಿದೆ ಎಂದು ಹೇಳಿದರು.
ನಮ್ಮ ಸೈನಿಕರ ಬಗ್ಗೆ, ಟೆಕ್ನಾಲಜಿ ಬಗ್ಗೆ ನಮಗೆ ಹೆಮ್ಮೆಯಿದೆ. ಭಾರತ ಇಂದು ಯುದ್ಧ ಸಾಮಗ್ರಿಗಳನ್ನು ಬೇರೆ ದೇಶಕ್ಕೆ ರಫ್ತು ಮಾಡುವ ಮಟ್ಟಿಗೆ ಬೆಳೆದಿದೆ. ಇದನ್ನು ಕಾಂಗ್ರೆಸ್ ಗಮನಿಸಬೇಕು ಎಂದರು.
ಚೀನಾ ವಸ್ತುಗಳ ನಿಷೇಧ ವಿಚಾರವಾಗಿ ಮಾತನಾಡಿದ ಅವರು, ಚೀನಾದಿಂದ ಹೆಚ್ಚಾಗಿ ಬರುತ್ತಿದ್ದ ಫೋನ್, ಆಟಿಕೆಗಳಿಗೆ ಹಂತ ಹಂತವಾಗಿ ಕಡಿವಾಣ ಹಾಕಲಾಗಿದೆ. ಈ ಹಿಂದೆ ಸಾಕಷ್ಟು ವಿದೇಶಿ ಒಪ್ಪಂದ ಆಗಿರುವುದರಿಂದ ಎಲ್ಲವನ್ನೂ ಒಂದೇ ಸಲ ನಿಲ್ಲಿಸಲು ಸಾಧ್ಯವಿಲ್ಲ. ಅಲ್ಲದೇ, ವಿಶ್ವಸಂಸ್ಥೆ ನಿಯಮಗಳನ್ನು ಪಾಲನೆ ಮಾಡಬೇಕಿದೆ ಎಂದು ತಿಳಿಸಿದರು.