ಯಾವ ಸರ್ಕಾರದಲ್ಲಿ ಎನ್‌ಡಿಆರ್‌ಎಫ್ ಹಣ ಎಷ್ಟು ಬಂದಿದೆ, ರಾಜ್ಯ ಸರ್ಕಾರ ಬಹಿರಂಗಪಡಿಸಲಿ

0
10
ಬಸವರಾಜ

ಹುಬ್ಬಳ್ಳಿ: ರಾಜ್ಯಕ್ಕೆ ಕೇಂದ್ರದಿಂದ ಯುಪಿಎ ಕಾಲದಲ್ಲಿ ಎಷ್ಟು ಹಾಗೂ ಎನ್ ಡಿಎ ಕಾಲದಲ್ಲಿ ಎಷ್ಟು ಎನ್ ಡಿಆರ್ ಎಫ್ ಹಣ ಬಂದಿದೆ ಅನ್ನುವುದನ್ನು ರಾಜ್ಯ ಸರ್ಕಾರ ಬಹಿರಂಗ ಪಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಧೋಗತಿ ಸ್ಥಿತಿ ತಲುಪಿದೆ. ಅದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್ ಗೆ ಹೋಗಿರುವುದು ರಾಜಕೀಯ ತಂತ್ರಗಾರಿಕೆ ಎಂದು ಹೇಳಿದರು.

ರಾಜ್ಯ ಸರ್ಕಾರ ಕೇಂದ್ರದಿಂದ ಹಣ ಬಂದಿಲ್ಲ ಎಂದು ಹೇಳುವುದನ್ನು ಬಿಟ್ಟು, ಯುಪಿಎ ಅವಧಿಯಲ್ಲಿ ಹಾಗೂ ಎನ್ ಡಿಎ ಅವಧಿಯಲ್ಲಿ ಎನ್ ಡಿ ಆರ್ ಎಫ್ ನಿಧಿಯಿಂದ ಎಷ್ಟು ಹಣ ಬಂದಿದೆ ಎಂದು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.

ಮತಗಳಿಂದ ಪರೋಕ್ಷ ಸರ್ಕಾರಕ್ಕೆ ಕಪಾಳಮೋಕ್ಷ: ಮೋದಿ ಮೋದಿ ಎಂದು ಕೂಗುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ಸಚಿವ ಶಿವರಾಜ್ ತಂಗಡಗಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇನ್ನು ಸ್ವಲ್ಪ ದಿನ ತಾಳಿ, ಮತಗಳ ಮೂಲಕ ಜನ ಪರೋಕ್ಷವಾಗಿ ಕಾಂಗ್ರೆಸ್ ಗೆ ಕಪಾಳಕ್ಕೆ ಹೊಡೆಯುತ್ತಾರೆ ಎಂದು ಹೇಳಿದರು
ರಾಜ್ಯದಲ್ಲಿ ಉತ್ತಮ ವಾತಾವರಣ: ರಾಜ್ಯದಲ್ಲಿ ವಾತಾವರಣ ಉತ್ತಮವಾಗಿದೆ. ಎಲ್ಲ ಕಡೆ ಮೋದಿ ಪರ ಅಲೆ ಇದೆ. ರಾಜ್ಯದಲ್ಲಿ ಭಿನ್ನಮತ ಶಮನ ಆಗುತ್ತಿದೆ. ಸಂಗಣ್ಣ ಕರಡಿ ಅವರು ಸಮಾಧಾನ ಆಗಿದ್ದಾರೆ.
ಸೆಲೆಬ್ರಿಟಿಗಳು ಬರುತ್ತಾರೆ : ಲೋಕಸಭೆ ಚುನಾವಣಾ ಪ್ರಚಾರಕ್ಕೆ ರಾಷ್ಟ್ರೀಯ ನಾಯಕರು ಎಲ್ಲ ಕಡೆ ಬರುತ್ತಾರೆ. ರಾಷ್ಟ್ರೀಯ ನಾಯಕರ ಜೊತೆ ಸೆಲೆಬ್ರೆಟಿಗಳು ಕೂಡಾ ಪ್ರಚಾರಕ್ಕೆ ಬರುತ್ತಾರೆ. ಎರಡು ಮೂರು ದಿನಗಳಲ್ಲಿ ರಾಷ್ಟ್ರೀಯ ನಾಯಕರ ಪ್ರಚಾರ ಪ್ರವಾಸದ ನಿರ್ಧಾರ ಆಗುತ್ತದೆ. ಧಾರವಾಡ ಹಾಗೂ ನಮ್ಮ ಕ್ಷೇತ್ರಕ್ಕೂ ಪ್ರಚಾರಕ್ಕೆ ಬರುತ್ತಾರೆ. ನಮ್ಮ ಕ್ಷೇತ್ರಕ್ಕೆ ಯಡಿಯೂರಪ್ಪ, ವಿಜಯೇಂದ್ರ ಸೇರಿ ಎಲ್ಲರೂ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದರು.
ಜನಾರ್ಧನರೆಡ್ಡಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ: ಮಾಜಿ ಸಚಿವ ಜನಾರ್ದನ ರೆಡ್ಡಿ ಪಕ್ಷಕ್ಕೆ ಬಂದಿರುವುದು ಬಲ ಬಂದಿದೆ. ಮೂರ್ನಾಲ್ಕು ಜಿಲ್ಲೆಗಳಲ್ಲಿ ಅವರ ಪ್ರಭಾವ ಇದೆ ಎಂದರು. ಇನ್ನು ಬಿಜೆಪಿಗೆ ಬಂದರೆ ಎಲ್ಲರೂ ಶುದ್ಧವಾಗುತ್ತಾರೆ ಎನ್ನುವ ಸಚಿವ ಸಂತೋಷ್ ಲಾಡ್ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅವರ ಅನುಭವದ ಮಾತು ಎಂದು ಲಾಡ್ ಗೆ ತಿರುಗೇಟು ನೀಡಿದರು.

Previous articleಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ
Next articleಜೈಲಿನಿಂದ ಸರ್ಕಾರ: ಕೇಜ್ರಿವಾಲ್ ಅವರ 2 ನೇ ಆದೇಶ