ಹುಬ್ಬಳ್ಳಿ: ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಕಾಲೇಜುಗಳು ವ್ಯಕ್ತಿತ್ವ ರೂಪಿಸುವ ವೇದಿಕೆಗಳಾಗಿದ್ದು, ಈ ಹಂತದಲ್ಲಿ ಮೌಲ್ಯಯುತ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಅವಶ್ಯವಾಗಿದೆ ಎಂದು ಮಾಜಿ ಶಾಸಕ, ಸಿದ್ಧಾರೂಢ ಮಠ ಟ್ರಸ್ಟ್ ಸಮಿತಿ ಮೇಲ್ಮನೆ ಅಧ್ಯಕ್ಷ, ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಡಿ.ಆರ್. ಪಾಟೀಲ ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸಭಾಂಗಣದಲ್ಲಿ ರಾಜ್ಯ ಎನ್‌ಎಸ್‌ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಜಂಟಿಯಾಗಿ ಐದು ದಿನಗಳ ಎನ್‌ಎಸ್‌ಎಸ್ ಅಧಿಕಾರಿಗಳಿಗೆ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅವಿಭಕ್ತ ಕುಟುಂಬಗಳಲ್ಲಿ ಬೆಳೆದ ನಾವು ಮೌಲ್ಯಗಳನ್ನು ಬೆಳೆಯುತ್ತಲೇ ರೂಢಿಸಿಕೊಂಡಿದ್ದೇವೆ. ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ನಮಗೆ ದೊರೆತ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಣೆ ಮಾಡಬೇಕು ಎಂದು ಕರೆ ನೀಡಿದರು.
ರಾಷ್ಟçಪಿತ ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದರ ಹಲವಾರು ವಿಚಾರಗಳು ನಮಗೆ ದಾರಿದೀಪವಾಗಿವೆ. ಎನ್‌ಎಸ್‌ಎಸ್ ಸ್ವಯಂ ಸೇವಕರು ತಾವು ಆಯ್ಕೆ ಮಾಡಿಕೊಂಡ ಗ್ರಾಮಗಳನ್ನು ಯಾವ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬ ವಿಚಾರವನ್ನು ಗ್ರಾಮದವರಿಗೆ ಬಿಡಬೇಕು. ಅವರ ಸಹಕಾರದೊಂದಿಗೆ ಗ್ರಾಮ ಅಭಿವೃದ್ಧಿಪಡಿಸಬೇಕು. ಎನ್‌ಎಸ್‌ಎನ್ ಕಾರ್ಯಕ್ರಮಗಳನ್ನು ಅನುಷ್ಠಾನ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಎನ್‌ಎಸ್‌ಎಸ್ ಕೋಶದ ರಾಜ್ಯ ಅಧಿಕಾರಿ ಪ್ರತಾಪ್ ಲಿಂಗಯ್ಯ, ಎನ್‌ಎಸ್‌ಎಸ್ ತರಬೇತಿ ಅಧಿಕಾರಿಗಳ ನಿರ್ದೇಶಕ ಪ್ರೊ. ಜಿ.ಬಿ. ಶಿವರಾಜು ಮಾತನಾಡಿದರು.
ಕುಲಪತಿ ಡಾ. ಸಿ. ಬಸವರಾಜು ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಗಾಂಧೀಜಿ ಕುರಿತಾದ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಎಸ್.ಎನ್.ಪರಾಂಡೆ, ಕುಲಸಚಿವೆ ಅನುರಾಧ ವಸ್ತ್ರದ, ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ, ಸಹಾಯಕ ಪ್ರಾಧ್ಯಾಪಕ ಐ.ಬಿ. ಬಿರಾದಾರ, ಪ್ರಶಾಂತ ಎಡ್ರಾಮಿಮಠ ಇದ್ದರು.