ಮೀಸಲಾತಿ ಹೋರಾಟಕ್ಕೆ ಜಿಲ್ಲೆಯಿಂದ ೧ ಲಕ್ಷ ಜನ

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಗಾಗಿ ಆಗ್ರಹಿಸಿ ಕೂಡಲಸಂಗಮದ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಟ್ರ‍್ಯಾಕ್ಟರ್ ರ‍್ಯಾಲಿ ಮೂಲಕ ಇದೇ ಡಿ.೧೦ ರಂದು ಬೆಳಗಾವಿ ಸುವರ್ಣ ಸೌಧ ಮುತ್ತಿಗೆಹೋರಾಟ ನಡೆಸಲಾಗುತ್ತಿದ್ದು, ಈ ಹೋರಾಟದಲ್ಲಿ ದಾವಣಗೆರೆ ಜಿಲ್ಲೆಯಿಂದ ಸುಮಾರು ೧ ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮದ ಜಿಲ್ಲಾಘಟಕದ ಅಧ್ಯಕ್ಷ ಆರ್.ವಿ. ಅಶೋಕ್ ಗೋಪನಾಳು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ೬ ಹಂತದ ಹೋರಾಟವನ್ನು ಮಾಡಲಾಗಿದ್ದು, ಇಷ್ಟಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳದೇ ಪಂಚಮಸಾಲಿಗಳಿಗೆ ಮೀಸಲಾತಿ ನೀಡುವಲ್ಲಿ ಮೀನಾಮೇಷ ಎಣಿಸುತ್ತಿವೆ. ಕೇವಲ ಭರವಸೆ ನೀಡುತ್ತಿವೆ ಹೊರತು ಕಾರ್ಯರೂಪಕ್ಕೆ ತರುವಲ್ಲಿ ವಿಳಂಬ ನೀತಿ ಅನುಸರಿಸುತ್ತಿವೆ. ಆದ್ದರಿಂದ ಈಗ ಬೃಹತ್ ಟ್ರಾಕ್ಟರ್ ಮೂಲಕ ಹೋರಾಟ ಹಮ್ಮಿಕೊಂಡಿದ್ದು, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಸರ್ಕಾರಕ್ಕೆ ಚುರುಕು ಮುಟ್ಟಿಸಲಾಗುವುದು ಎಂದು ತಿಳಿಸಿದರು.

ಡಿ.೯ರಂದು ರಾತ್ರಿ ೯ ಗಂಟೆಗೆ ಇಲ್ಲಿನ ಗಾಂಧಿವೃತ್ತದಿಂದ ಟ್ರ್ಯಾಕ್ಟರ್ ಮೂಲಕ ಬೃಹತ್ ಸಂಖ್ಯೆಯಲ್ಲಿ ಸಾಗಿ ಬೆಳಗಾವಿ ತಲುಪಿ ಅಲ್ಲಿ ರಾಜ್ಯದ ಎಲ್ಲಾ ಭಾಗಗಗಳಿಂದ ಆಗಮಿಸಿದ ಸಮಾಜದವರನ್ನೊಳಗೊಂಡು ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೇ ಅಧಿವೇಶನದಲ್ಲಿಯೇ ಪಂಚಮಸಾಲಿಗಳಿಗೆ ೨ಎ ಮೀಸಲಾತಿ ಘೋಷಿಸಬೇಕು ಇಲ್ಲದಿದ್ದಲ್ಲಿ ಪಂಚಮಸಾಲಿಗಳ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಮಹಾಸಭಾದ ಪದಾಧಿಕಾರಿಗಳಾದ ಮಂಜು ಪೈಲ್ವಾನ್, ಹೆಚ್.ಕೆ.ಗಿರೀಶ್ ಮರಡಿ, ಶಂಕರ್, ವೀರೇಶ್ ಇದ್ದರು.