ಮೀನುಗಾರರ ಸಹಾಯ ಪಡೆಯಲಿದೆ ಸೇನೆ

ಕಾರವಾರ: ಸಿಂದೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಉಗ್ರರು ಕರಾವಳಿಯ ಸಮುದ್ರ ಮಾರ್ಗದ ಮೂಲಕ ನುಸುಳುವ ಸಾಧ್ಯತೆ ಇರುವುದರಿಂದ ಸಮುದ್ರಕ್ಕಿಳಿಯುವ ಮೀನುಗಾರರಿಗೂ ಅಪರಿಚಿತ ಬೋಟ್ ಹಾಗೂ ವಸ್ತುಗಳ ಮೇಲೆ ಕಣ್ಗಾವಲಿಡುವಂತೆ ಸೂಚಿಸಲಾಗಿದೆ.
ರಾಜ್ಯವು ೩೪೩ ಕಿ.ಮೀ ಕಡಲತೀರವನ್ನು ಹೊಂದಿದ್ದು, ೧೦ ಸಾವಿರಕ್ಕೂ ಹೆಚ್ಚು ಮೋಟಾರು ದೋಣಿಗಳಿದೆ. ಅಲ್ಲದೆ ೪೭೦೦ ಆಳ ಸಮುದ್ರ ಮೀನುಗಾರಿಕಾ ಬೋಟ್‌ಗಳಿವೆ. ಹವಾಮಾನ ವೈಪರೀತ್ಯದ ಹೊರತಾಗಿ ನಿತ್ಯ ಮೀನುಗಾರಿಕೆಗೆ ತೆರಳುವ ಈ ಮೀನುಗಾರರು ಸಮುದ್ರದುದ್ದಕ್ಕೂ ರಾತ್ರಿ ಹಗಲೆನ್ನೆದೇ ಮೀನುಗಾರಿಕೆ ನಡೆಸುತ್ತಾರೆ. ಆದ್ದರಿಂದ ಈ ಮೀನುಗಾರರ ಸಹಾಯ ಪಡೆಯಲು ಸೇನೆ ಮುಂದಾಗಿದೆ.
ಈ ಬಗ್ಗೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಜಿಲ್ಲೆಯ ಪ್ರತಿ ಬಂದರು ವ್ಯಾಪ್ತಿಯಲ್ಲಿ ಮೀನುಗಾರರ ಸಭೆ ನಡೆಸಿ ಮಾಹಿತಿ ನೀಡುತ್ತಿದ್ದಾರೆ. ಸಮುದ್ರದಲ್ಲಿ ಯಾವುದಾದರೂ ಅನುಮಾನಾಸ್ಪದ ಮೀನುಗಾರಿಕಾ ಬೋಟ್‌ಗಳು ಕಂಡುಬಂದಲ್ಲಿ, ಕರೆಗಳು ಬಂದಲ್ಲಿ ಮಾಹಿತಿ ನೀಡುವಂತೆ ಮೀನುಗಾರರಿಗೆ ತಿಳಿವಳಿಕೆ ನೀಡಲಾಗಿದೆ. ಅಲ್ಲದೆ ರಾಜ್ಯದ ಎಲ್ಲ ಬಂದರುಗಳಲ್ಲಿಯೂ ಸುರಕ್ಷತೆ ಹೆಚ್ಚಿಸಲಾಗಿದೆ.