ಮರು ಸಮೀಕ್ಷೆ ನಡೆಸಲು ನಿರ್ಣಯ: ಶಂಕರ ಬಿದರಿ

ದಾವಣಗೆರೆ: ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಅನುಷ್ಠಾನಗೊಳಿಸದೆ ಮರು ಸಮೀಕ್ಷೆ ನಡೆಸಿ ಎಲ್ಲಾ ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿರ್ಣಯ ತೆಗೆದುಕೊಂಡಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಈಚೆಗೆ ನಡೆದ ಸಭೆಯಲ್ಲಿ ಲಿಂಗಾಯತರಲ್ಲಿ ಗಾಣಿಗರು, ಕಂಬಾರರು, ಶಿವಶಿಂಪಿ, ನೇಕಾರರು, ಜಾಲರು ಸೇರಿದಂತೆ ಅನೇಕ ಉಪಪಂಗಡಗಳು ಇದ್ದು, ಅವರಿಗೆಲ್ಲ ಅನ್ಯಾಯ ಆಗಿದೆ. ಅದನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಾನೂನಿನ ಸೆಕ್ಷನ್ ೧೧ರ ಪ್ರಕಾರ ಪ್ರತಿ ೧೦ ವರ್ಷಕ್ಕೊಮ್ಮೆ ಸರ್ಕಾರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಮಾಡಬೇಕೆಂದು ಇದೆ. ೨೦೧೫ರಲ್ಲಿ ಸಮೀಕ್ಷೆ ಮಾಡಿದ್ದು, ಈಗಾಗಲೇ ೧೦ ವರ್ಷ ಪೂರ್ಣಗೊಂಡು ಅಸ್ತಿತ್ವವನ್ನೇ ಕಳೆದುಕೊಂಡಿದೆ. ಆದ್ದರಿಂದ ಹೊಸದಾಗಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಬೇಕೆಂದು ಸಭೆ ನಿರ್ಣಯ ತೆಗೆದುಕೊಂಡಿದೆ ಎಂದು ಮಾಹಿತಿ ನೀಡಿದರು.
ಲಿಂಗಾಯತ ಹೆಳುವರಿಗೆ ೨೦ ರಿಂದ ೪೯ ಮಾರ್ಕ್ಸ್ ಕೊಟ್ಟಿದ್ದಾರೆ, ಹಿಂದು ಹೆಳುವರಿಗೆ ೧೨೫ ರಿಂದ ೧೪೯, ಲಿಂಗಾಯತ ಕುರುಬರಿಗೆ ೨೦ ರಿಂದ ೪೯, ಹಿಂದು ಕುರುಬರಿಗೆ ೨೨೫-೧೪೯ ಮಾರ್ಕ್ಸ್ ಕೊಟ್ಟಿದ್ದಾರೆ. ಹೀಗೆ ಸಾಕಷ್ಟು ತಪ್ಪುಗಳು ಇವೆ. ಸ್ವಲ್ಪ ಕಣ್ತೆರೆದು ನೋಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗಿಂತ ಸಾವಿರಪಟ್ಟು ಕಾನೂನು ಪರಿಣತಿ ಹೊಂದಿದ್ದಾರೆ. ಅವುಗಳನ್ನು ಎಲ್ಲ ಸರಿಪಡಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದರು.