ಬೆಳಗಾವಿ: ಚಿಕ್ಕೋಡಿ ತಾಲೂಕಿನ ಅಂಕಲಿಯ ಮಯೂರ ಚಿತ್ರಮಂದಿರಕ್ಕೆ 50ನೇ ವರ್ಷದ ಸುವರ್ಣ ಸಂಭ್ರಮ.
ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆಯವರು ಚಿಕ್ಕೋಡಿ ತಾಲೂಕಿನ ಅಂಕಲಿಯ ಗ್ರಾಮದಲ್ಲಿ 1975 ರಲ್ಲಿ ಆರಂಭಿಸಲಾದ ಮಯೂರ ಚಿತ್ರಮಂದಿರಕ್ಕೆ 50 ವರ್ಷ ಪೂರ್ಣಗೊಂಡಿದ್ದು ನಾಳೆ ಮೇ 18 ರಂದು ರವಿವಾರ, ಅಂಕಲಿಯ ಮಯೂರ ಚಿತ್ರಮಂದಿರದಲ್ಲಿ ಸಂಜೆ ವಿಜಯ್ ಪ್ರಕಾಶ ಅವರ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದ್ದು, ಕೆಎಲ್‌ಇ ಸಂಸ್ಥೆಯ ಎಸ್.ಸಿ.ಪಾಟೀಲ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಅಂಕಲಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ರವಿವಾರ ದಿನಾಂಕ ಮೇ 18ರಂದು ಸಂಜೆ 5:30 ಗಂಟೆಗೆ ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿ ಜರುಗಲಿದೆ. ಇನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ಕನ್ನಡ ಚಲನಚಿತ್ರ ನಟರಾದ ಕ್ರೇಜಿಸ್ಟಾರ್ ವಿ.ರವಿಚಂದ್ರನ್, ಡಾಲಿ ಧನಂಜಯ, ಮಂಡ್ಯ ರಮೇಶ, ಹಾಗೂ ನಟಿಯರಾದ ಅನು ಪ್ರಭಾಕರ, ಅಮೂಲ್ಯ, ಸಪ್ತಮಿ ಗೌಡ, ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಭಾಗವಹಿಸಲಿದ್ದಾರೆ.
ಮಯೂರ ಸುವರ್ಣ ಸಂಭ್ರಮ: ೧೯೭೫ ರಲ್ಲಿ ಮಯೂರ ಚಿತ್ರ ಮಂದಿರ ೪೨೫ ಆಸನಗಳನ್ನು ಹೊಂದಿದ ಈ ಚಿತ್ರಮಂದಿರವನ್ನು ಅಂದು ೩ ಲಕ್ಷರೂದಲ್ಲಿ ನಿರ್ಮಿಸಲಾಯಿತು. ದಿ, ಚಿದಾನಂದ ಕೋರೆ ಇವರ ಅಧ್ಯಕ್ಷತೆಯಲ್ಲಿ ಮಾಜಿ ಸಚಿವ ದಿ ಎಚ್.ವಿ. ಕೌಜಲಗಿ ಇವರು ಉದ್ಘಾಟಿಸಿದರು. ದೇವರಗುಡಿ ಚಿತ್ರ ಪ್ರದರ್ಶನದೊಂದಿಗೆ ಪ್ರಾರಂಭಗೊಂಡ ಚಿತ್ರಮಂದಿರಕ್ಕೆ, ದಿ. ಉದಯಶಂಕರ, ಶ್ರೀನಾಥ, ಭಾರತಿ, ವಿಷ್ಣುವರ್ಧನ್, ಟೆನ್ನಿಸ್ ಕೃಷ್ಣ, ಮುಖ್ಯಮಂತ್ರಿ ಚಂದ್ರು, ಶೈಲಶ್ರೀ, ಶೃತಿ, ಶರಣ, ಉಮಾಶ್ರೀ, ಜಯಪ್ರದಾ, ರಾಘವೇಂದ್ರ ರಾಜಕುಮಾರ, ಪುನೀತ ರಾಜಕುಮಾರ ರಂತಹ ಕಲಾವಿದರು ಭೇಟಿ ನೀಡಿ ಶುಭಕೋರಿದ್ದಾರೆ.
ಇಲ್ಲಿಯ ವರೆಗೆ ೨೨೧೦ ಚಲನಚಿತ್ರಗಳು ಪ್ರದರ್ಶನ ಗೊಂಡಿವೆ. ೨೦೦೦ ರಲ್ಲಿ ರಜತ ಮಹೋತ್ಸವ ಆಚರಿಸಲಾಗಿತ್ತು. ಆ ಸಂದರ್ಭದಲ್ಲಿ ಜಯಪ್ರದಾ, ರಾಘವೇಂದ್ರ ಮತ್ತು ಪುನೀತ ರಾಜಕುಮಾರ, ಎಣಗಿ ಬಾಳಪ್ಪನವರು ಆಗಮಿಸಿದ್ದರು, ಮೇ ೧೮ ರಂದು ಅದ್ಧೂರಿಯಾಗಿ ಸುವರ್ಣ ಸಂಭ್ರ‍್ರಮವನ್ನು ಆಚರಿಸಲಿದೆ.