ಬಂಧುಗಳ ಮೇಲೆ ತುಂಬಾ ಅಭಿಮಾನವಿದೆಯೇ. ಹೆಂಡತಿ ಮಕ್ಕಳನ್ನು ಬಿಟ್ಟು ಬದುಕಲಾರದಷ್ಟ್ಟು ನಂಟಿದೆಯೇ. ಸ್ನೇಹಿತರ ಜೊತೆ ಅವಿನಾಭಾವವಾದ ಸ್ನೇಹಭಾವವಿದೆಯೇ. ಹಾಗಿದ್ದರೆ ಭಾಗವತದಲ್ಲಿನ ಸಂದೇಶವನ್ನು ತಿಳಿಯಬೇಕು.
ಪ್ರವಾಹದ ವೇಗದಿಂದ ಮರಳಿನ ರಾಶಿ ಕೊಚ್ಚಿ ಹೋಗುತ್ತದೆ. ಮತ್ತೆ ಒಂದು ಕಡೆ ಸೇರುತ್ತದೆ. ಹಾಗೆ ಕಾಲ ಮಹಿಮೆಯಿಂದ ಜನರು ಒಂದೆಡೆ ಸೇರುತ್ತಾರೆ ಮತ್ತು ಅಗಲುತ್ತಾರೆ. ಹೀಗಿದ್ದಾಗ ಯಾರನ್ನೇಕೆ ಪ್ರಾಣಿಕ್ಕಿಂತ ಹೆಚ್ಚು ಪ್ರೀತಿ ಮಾಡಬೇಕು ಹಚ್ಚಿಕೊಳ್ಳಬೇಕು. ಎಲ್ಲವನ್ನೂ ಬಿಟ್ಟು ಪರಮಾತ್ಮನನ್ನೇ ನಂಬಿ ಅವನೆಡೆ ಜೀವನ ಸಾಗಿಸುವುದೇ ಉತ್ತಮವಾದ ಮಾರ್ಗ.
ಪ್ರಯತ್ನ ಹಾಗೂ ಮನೋಬಲಗಳೇ ಮುಖ್ಯ: ಒಂದೇ ಗಾಲಿಯಿಂದ ರಥವು ಚಲಿಸುವುದಿಲ್ಲ. ಕೇವಲ ದೈವದಿಂದ ಜೀವನ ಸಾಗುವುದಿಲ್ಲ. ಪುರುಷ ಪ್ರಯತ್ನವೂ ಕೂಡ ಅನಿವಾರ್ಯ. ಬೀಜವೇ ಇಲ್ಲದೇ ಹೊಲವನ್ನು ಉತ್ತುವುದು ಹೇಗೆ ನಿಷ್ಫ್ಪಲವೋ, ಹಾಗೇ ಪುರುಷ ಪ್ರಯತ್ನವೆಂಬ ಬೀಜವಿಲ್ಲದೇ ದೈವವು ಫಲವನ್ನು ನೀಡುವುದಿಲ್ಲ. ಬಾಹುಬಲ ಹಾಗೂ ಮನೋಬಲಗಳೂ ಕೂಡ ಜೀವನದಲ್ಲಿ ತುಂಬಾ ಮುಖ್ಯ. ಇವುಗಳಿಲ್ಲದ ಜಾತಕದಲ್ಲಿ ಚಂದ್ರನ ಬಲ ಇದ್ದರೂ ಏನು ಪ್ರಯೋಜನ.
ಬದುಕಿ ಸಾಧಿಸು: ಕೆಲವರು ಜಿಗುಪ್ಸಿತರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದರಿಂದ ಏನೂ ಪ್ರಯೋಜನವಿಲ್ಲ. ಇಹಲೋಕದಲ್ಲಿ ಕೆಟ್ಟ ಹೆಸರನ್ನು ಪಡೆಯುತ್ತಾರೆ. ಪರಲೋಕದಲ್ಲಂತೂ ನಿಶ್ಚಯವಾಗಿ ಅವರಿಗೆ ಒಳ್ಳೆಯದಾಗುವುದಿಲ್ಲ.
ಅವರ ಕಾರ್ಯವನ್ನು ಯಾರೂ ಸಹ ಪ್ರಶಂಸೆ ಮಾಡುವುದಿಲ್ಲ. ಆದ್ದರಿಂದ ಆತ್ಮಹತ್ಯೆಯಲ್ಲಿ ಕೇವಲ ದೋಷಗಳಷ್ಟೇ ಇದೆ. ಒಂದೇ ಒಂದು ಗುಣವೂ ಕೂಡ ಇರುವುದಿಲ್ಲ. ಆದರೆ. ಬದುಕಿದರೆ ಬಹಳ ಒಳ್ಳೆಯ ಸಂದರ್ಭಗಳಿವೆ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳದೇ ಬದುಕುತ್ತೇನೆ. ಬದುಕಿದ್ದರೆ ನಿಶ್ಚಯವಾಗಿ ಶ್ರೇಯಸ್ಸು ಪ್ರಾಪ್ತವಾಗುತ್ತದೆ ಎನ್ನುತ್ತಾರೆ ಪ್ರಾಣದೇವರ ಸಂದೇಶವಾಗಿದೆ.