ಮದ್ಯ ಗುಣಮಟ್ಟ ಪರೀಕ್ಷೆಗೆ ವಿಜ್ಞಾನಿ..!

0
9

ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ರಾಜ್ಯ ಸರಕಾರದ ಆಯಕಟ್ಟಿನ ಸ್ಥಾನಗಳಿಗೆ ಅಧಿಕಾರಿಗಳು ಹೇಗೆಲ್ಲ ಲಾಬಿ ಮಾಡುತ್ತಾರೆ ಎಂಬುದಕ್ಕೆ ಅಬಕಾರಿ ಇಲಾಖೆಯಲ್ಲೊಂದು ಅದ್ಭುತ ನಿದರ್ಶನವಿದೆ. ಮದ್ಯದ ಗುಣಮಟ್ಟ ಪರೀಕ್ಷಿಸುವ ಅಧಿಕಾರಿ ಹುದ್ದೆಗೆ ನ್ಯಾಯವಿಜ್ಞಾನ (ಡಿಎನ್‌ಎ)ಪ್ರಯೋಗಾಲಯದ ವಿಜ್ಞಾನಿಯನ್ನು ಸರಕಾರ ವರ್ಗಾಯಿಸಿದೆ. ಇದು ನಿಯಮ ಬಾಹಿರವೆಂದು ಸ್ವತಃ ಅಬಕಾರಿ ಇಲಾಖೆ ಹೇಳಿದೆ.
ನಡೆದಿರುವುದು ಇಷ್ಟು. ರಾಜ್ಯ ಅಬಕಾರಿ ಇಲಾಖೆಯ ಕೇಂದ್ರ ಕಚೇರಿಯ ಮುಖ್ಯ ರಾಸಾಯನಿಕ ತಜ್ಞರ ಹುದ್ದೆಯಲ್ಲಿ ಅನ್ಯ ಕರ್ತವ್ಯದ ಮೇಲೆ ಎಸ್. ಮಂಜುನಾಥ್ ಎಂಬುವವರನ್ನು ಕಾರ್ಯ ನಿರ್ವಹಿಸುತ್ತಿದ್ದು, ಈ ಹುದ್ದೆಗೆ ಪುರುಷೋತ್ತಮ್ ಎಲ್. ಎಂಬುವವರನ್ನು ನಿಯೋಜಿಸುವಂತೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ನಡಾವಳಿಯಲ್ಲಿ (೫-೧೨-೨೦೨೩) ಸೂಚಿಸಿದ್ದಾರೆ.
ಕಳೆದ ೫ ವರ್ಷಗಳಿಂದ ಈ ಹುದ್ದೆಯಲ್ಲಿರುವ ಮಂಜುನಾಥ್ ಅವರು ಆಹಾರ ವಿಶ್ಲೇಷಕರು. ಇವರು ಡಿಸ್ಟಿಲರಿ, ಬ್ರೀವರಿ, ವೈನರಿಗಳಲ್ಲಿ ಉತ್ಪಾದನೆ ಆಗುವ ಮದ್ಯ, ಬಿಯರ್ ಮತ್ತು ವೈನ್‌ಗಳನ್ನು ಮಾನದಂಡದ ಅನ್ವಯ ವಿಶ್ಲೇಷಣೆ ಮಾಡುತ್ತಾರೆ. ನಾರ್ಕೊಟಿಕ್ ಡ್ರಗ್ಸ್ಗಳ ವಿಶ್ಲೇಷಣೆಯಲ್ಲಿ ಪರಿಣಿತಿ ಹೊಂದಿದ್ದಾರೆ.
ಆದರೆ ಇವರ ಹುದ್ದೆಗೆ ಸಿಎಂ ಕಚೇರಿಯಿಂದ ನಿಯೋಜನೆಗೊಂಡಿರುವ ಪುರುಷೋತ್ತಮ್ ಅವರು ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯದ ಸಹಾಯಕ ನಿರ್ದೇಶಕರು. ಇವರನ್ನು ಒಳಾಡಳಿತ ಇಲಾಖೆಯಿಂದ ಅಬಕಾರಿ ಇಲಾಖೆಗೆ (ಆದೇಶ ದಿನಾಂಕ ೧೭-೦೧-೨೦೨೪) ಹಸ್ತಾಂತರಿಸಲಾಗಿದೆ. ಇವರು ಮದ್ಯ ಮತ್ತು ಮಾದಕ ವಸ್ತುಗಳ ವಿಶ್ಲೇಷಣೆಯಲ್ಲಿ ಪರಿಣಿತರಲ್ಲ. ಡಿಎನ್‌ಎ ಪರೀಕ್ಷೆಯಲ್ಲಿ ಪರಿಣಿತರು. ಆದಾಗ್ಯೂ ಅರ್ಹತೆ ಇಲ್ಲದ ಅಧಿಕಾರಿಯನ್ನು ಈ ಹುದ್ದೆಗೆ ನಿಯೋಜನೆ ಮಾಡುವುದು ಸಮಂಜಸವಲ್ಲ ಎಂದು ಸ್ವತಃ ಅಬಕಾರಿ ಇಲಾಖೆಯ ಆಯುಕ್ತರ ಕಚೇರಿ ಅಬಕಾರಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ (೨೪-೦೧-೨೦೨೪) ಬರೆದು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ಈ ವಿದ್ಯಮಾನ ಈಗ ಸರಕಾರದ ಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅಬಕಾರಿ ಇಲಾಖೆಯ ಕೇಂದ್ರ ಕಚೇರಿಯ ಮುಖ್ಯ ರಾಸಾಯನಿಕ ಅಧಿಕಾರಿ ಹುದ್ದೆಗೆ ಕಳೆದ ನಾಲ್ಕು ತಿಂಗಳಿನಿಂದ ಸಿಎಂ ಕಚೇರಿ, ಅಬಕಾರಿ ಸಚಿವರ ಕಚೇರಿ, ಅಬಕಾರಿ ಆಯುಕ್ತರ ಕಚೇರಿ ನಡುವೆ ನಿರಂತರ ಪತ್ರ ವ್ಯವಹಾರ ನಡೆದಿದೆ. ಮುಖ್ಯ ರಾಸಾಯನಿಕ ಅಧಿಕಾರಿ ಹುದ್ದೆಗೆ ಎಷ್ಟೊಂದು ಬೇಡಿಕೆ ಇದೆ ಎಂದರೆ, ಸ್ವತಃ ಸಿಎಂ ಕಚೇರಿ ಎರಡು ಬಾರಿ ನಡಾವಳಿ ಹೊರಡಿಸಿದೆ. ಆದಾಗ್ಯೂ ತಾಂತ್ರಿಕ ಅರ್ಹತೆ ಇಲ್ಲದೇ ಇರುವುದರಿಂದ ಹಾಲಿ ಅಧಿಕಾರಿ ಮುಂದುವರಿಸುವಂತೆ ಅಬಕಾರಿ ಇಲಾಖೆ ಪಟ್ಟು ಹಿಡಿದಿದೆ.
ರಾಜ್ಯದಲ್ಲಿ ಸದ್ಯಕ್ಕೆ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿಲ್ಲವಾದರೂ ಕೇವಲ ಸಿಎಂ ಕಚೇರಿಯಿಂದ ಮಾತ್ರ ವರ್ಗಾವಣೆ ಮತ್ತು ನಿಯೋಜನೆ ಪ್ರಕ್ರಿಯೆ ಜಾರಿಯಲ್ಲಿದೆ. ಅಬಕಾರಿ ಇಲಾಖೆಯ ಈ ಪ್ರಮುಖ ಹುದ್ದೆಗೆ ನಿಯೋಜನೆಗಾಗಿಯೇ ಸಿಎಂ ಕಚೇರಿ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳ ನಡುವೆ ಅಂತಃಕಲಹ ಮುಗಿಲುಮುಟ್ಟಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನವರಿ ಅಂತ್ಯದೊಳಗೆ ಎಲ್ಲ ವರ್ಗಾವಣೆಗಳನ್ನು ಪೂರ್ಣಗೊಳಿಸಬೇಕಾಗಿದೆ. ಹೀಗಾಗಿ ಮುಖ್ಯ ರಾಸಾಯನಿಕ ಅಧಿಕಾರಿ ಹುದ್ದೆ ಅಂತಿಮವಾಗಿ ಯಾರ ಪಾಲಾಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

Previous articleಉ.ಕ.ದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಆಟಕ್ಕುಂಟು, ಲೆಕ್ಕಕ್ಕಿಲ್ಲ
Next articleಕಾಡಾನೆಗಳನ್ನು ಹಿಮ್ಮೆಟ್ಟಿಸಲು ಅಭಿಮನ್ಯು ತಂಡ