Home News ಮತ್ತೆ ನದಿ ಪಾತ್ರದ ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ

ಮತ್ತೆ ನದಿ ಪಾತ್ರದ ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ

ಬಾಗಲಕೋಟೆ (ಕುಳಗೇರಿ ಕ್ರಾಸ್): ನವಿಲುತೀರ್ಥ ಜಲಾಶಯದ ಮೇಲ್ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಸದ್ಯ ಹೆಚ್ಚುವರಿ ನೀರನ್ನ ಮಲಪ್ರಭಾ ನದಿಗೆ ಬಿಟ್ಟಿದ್ದರಿಂದ ಜಿಲ್ಲೆಯ ಗಡಿ ಭಾಗದ ಹುಬ್ಬಳ್ಳಿ ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ 218 ಸಂಪರ್ಕ ಕಲ್ಪಿಸುವ ಹಳೆ ಸೇತುವೆ ಜಲಾವೃತಗೊಂಡಿದೆ.
ನವಿಲುತಿರ್ಥ ಜಲಾಶಯದಿಂದ ೫೫೯೪ ಕ್ಯೊಸೆಕ್ ನೀರು ಹರಿಬಿಡಲಾಗಿದ್ದು ನದಿ ಪಾತ್ರದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಲವು ಸೇತುವೆಗಳು ಜಲಾವೃತಗೊಂಡಿವೆ. ಬಾಗಲಕೋಟೆ-ಗದಗ ಸಂಪರ್ಕ ರಸ್ತೆ ಕಡಿತಗೊಂಡಿದ್ದರಿಂದ ಹಲವು ಗ್ರಾಮದ ಜನರಿಗೆ ಸುತ್ತುವರೆದು ನದಿ ದಾಟುವ ಪರಿಸ್ಥಿತಿ ಎದುರಾಗಿದೆ.

ರೈತರ ಜಮಿನುಗಳಿಗೆ ಪ್ರವಾಹದ ನೀರು ನುಗ್ಗಿದ್ದು ಸದ್ಯ ಗೋವಿನಜೋಳ, ಈರುಳ್ಳಿ, ಕಬ್ಬು, ಸುರ್ಯಕಾಂತಿ, ಹೆಸರು ಸೇರಿದಂತೆ ತೋಟಗಾರಿಕೆ ಬೆಳೆಗಳಾದ ಪೇರಲ ಮುಂತಾದ ಬೆಳೆಗಳಿಗೆ ನೀರು ನುಗ್ಗಿದ್ದು ನದಿ ಪಾತ್ರದ ರೈತರಲ್ಲಿ ಆತಂಕ ಮನೆಮಾಡಿದೆ.
ಸದ್ಯ ಮಲಪ್ರಭಾ ಪ್ರವಾಹದ ನೀರು ಹೆಚ್ಚುತ್ತಿದ್ದು ನದಿ ಪಾತ್ರದಲ್ಲಿನ ರೈತರು ಪಂಪ್‌ಸೆಟ್ ಜಾನುವಾರು ಸೇರಿದಂತೆ ತಮ್ಮ ಸಲಕರಣೆಗಳನ್ನ ಬೇರೆಕಡೆ ಸಾಗಿಸುತ್ತಿದ್ದಾರೆ. ತಾವು ಬೆಳೆದ ಪೇರಲ ಹಣ್ಣುಗಳನ್ನ ಬಿಡಿಸಿ ಅಗ್ಗದ ಬೆಲೆಗೆ ಮಾರುತ್ತಿದ್ದಾರೆ. ಹಣ್ಣುಗಳನ್ನ ಮೊದಲು ತೆಗೆದುಕೊಂಡು ಹೋಗುವಂತೆ ರೈತರು ವ್ಯಾಪಾರಸ್ಥರಲ್ಲಿ ಅಂಗಲಾಚುತ್ತಿದ್ದಾರೆ.
ಕಳೆದ ಬಾರಿ ಬೆಳೆದಿದ್ದ ಉತ್ತಮ ಬೆಳೆಗಳು ರೈತರ ಕೈ ಸೇರುವ ಸಂದರ್ಭದಲ್ಲಿ ಪ್ರವಾಹಕ್ಕೆ ತುತ್ತಾಗಿದ್ದವು. ಸದ್ಯ ಮತ್ತೆ ಸಾಲ ಮಾಡಿ ಬಿತ್ತನೆ ಮಾಡಿದ ರೈತರ ಜಮಿನುಗಳಿಗೆ ಪ್ರವಾಹದ ನೀರು ನುಗ್ಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬಾದಾಮಿ ತಹಸೀಲ್ದಾರ್‌ ಜೆ.ಬಿ. ಮಜ್ಜಗಿ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿದ್ದು ಮಲಪ್ರಭಾ ನದಿಯ ಪ್ರವಾಹವನ್ನು ವೀಕ್ಷಿಸಿದ ಅವರು ನೀರಿನ ಮಟ್ಟ ಪರಿಶೀಲಿಸಿದರು. ನಂತರ ಗ್ರಾಮಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿ ನದಿ ಪಾತ್ರದಲ್ಲಿ ಬಟ್ಟೆ ತೊಳೆಯುವುದು, ಸ್ನಾನ ಮಾಡುವುದು, ವಾಹನ ಹಾಗೂ ಜಾನುವಾರುಗಳ ಮೈ ತೊಳೆಯುವುದು ಮಾಡಬಾರದು, ಸೆಲ್ಫಿ ಸೇರಿದಂತೆ ಪ್ರವಾಹದಲ್ಲಿ ಹುಚ್ಚು ಸಾಹಸ ಮಾಡುವ ಗೋಜಿಗೆ ಹೋಗಬಾರದು ಎಂದು ಎಚ್ಚರಿಸಿದರು. ಪ್ರವಾಹ ಪ್ರದೇಶದಲ್ಲಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Exit mobile version