Home ಸುದ್ದಿ ರಾಜ್ಯ 20 ವರ್ಷದ ಗಣಿ ಹಗರಣಕ್ಕೆ ಕ್ಲೈಮ್ಯಾಕ್ಸ್ ಸನ್ನಿಹಿತ!

20 ವರ್ಷದ ಗಣಿ ಹಗರಣಕ್ಕೆ ಕ್ಲೈಮ್ಯಾಕ್ಸ್ ಸನ್ನಿಹಿತ!

0

ಶಿವಕುಮಾರ್ ಮೆಣಸಿನಕಾಯಿ

ಬೆಂಗಳೂರು: ದೇಶದ ಇತಿಹಾಸದಲ್ಲೇ ನೈಸರ್ಗಿಕ ಸಂಪತ್ತಿನ ಲೂಟಿ ಹೊಡೆದ ಅತಿದೊಡ್ಡ ಹಗರಣ ಕರ್ನಾಟಕದಲ್ಲಿ ನಡೆದಿದೆ ಎಂದು ಸುಪ್ರಿಂಕೋರ್ಟ್ ಉದ್ಘಾರ ತೆಗೆದಾಗ ಇಡೀ ಜಗತ್ತು ಕರ್ನಾಟಕದ ಕಡೆಗೆ ತಿರುಗಿ ನೋಡಿತ್ತು!. ಸುಪ್ರಿಂಕೋರ್ಟ್‌ ನಿವೃತ್ತ ನ್ಯಾಯಾಧೀಶ ನ್ಯಾ.ಎನ್.ಸಂತೋಷ್ ಹೆಗ್ಡೆ 2006ರಲ್ಲಿ ಬೇಧಿಸಿದ 3 ಕೋಟಿ ಮೆಟ್ರಿಕ್ ಟನ್ ಕಬ್ಬಿಣದ ಅದಿರಿನ ಕಳ್ಳತನದ ಹಾದಿ 20ನೇ ವರ್ಷದ ಹೊಸ್ತಿಲಲ್ಲಿ 20 ಕೋಟಿ ಮೆಟ್ರಿಕ್ ಟನ್ ತಲುಪಿದೆ ಎಂದರೆ ಗಣಿ ಹಗರಣದ ಆಳ-ಅಗಲ ಎಷ್ಟಿರಬಹುದು ಎಂಬುದನ್ನು ಯಾರಾದರೂ ಅಂದಾಜು ಮಾಡಬಹುದು.

ಆದರೆ ಕರ್ನಾಟಕದ ಜನರಿಗೆ ಸೇರಿದ ಲಕ್ಷ ಕೋಟಿ ರೂಪಾಯಿ ಮೌಲ್ಯದ ನೈಸರ್ಗಿಕ ಸಂಪತ್ತನ್ನು ವಸೂಲಿ ಮಾಡುವುದು ಹೇಗೆ ಎಂಬುದಕ್ಕೆ ರಾಜ್ಯ ಸರಕಾರ ಉತ್ತರ ಕಂಡುಕೊಳ್ಳಬೇಕಿದೆ. ರಾಜ್ಯದ ಬಳ್ಳಾರಿ (ಈಗಿನ ವಿಜಯನಗರ ಜಿಲ್ಲೆ ಒಳಗೊಂಡು), ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ 2006 ರಿಂದ 2011ರವರೆಗೆ ನಡೆದ ಅವ್ಯಾಹತ ಅಕ್ರಮ ಗಣಿಗಾರಿಕೆಯ ತನಿಖೆಗೆ ಈಗ 20 ವರ್ಷ ತುಂಬುತ್ತಿದೆ.

ಅಧಿಕಾರಸ್ಥ ರಾಜಕಾರಣಿಗಳು, ಅಧಿಕಾರಶಾಹಿಗಳ ಅಕ್ರಮ ಕೂಟ ಅದಿರು ಸಂಪತ್ತನ್ನು ಹಗಲು ದರೋಡೆ ಮಾಡಿದ್ದು ಈಗ ಇತಿಹಾಸ. ಇದರಲ್ಲಿ ಭಾಗಿಯಾದ ದರೋಡೆಕೋರರ ವಿರುದ್ಧದ ತನಿಖೆ ಈವರೆಗೆ ಪೂರ್ಣಗೊಂಡಿರುವುದು ಕೇವಲ ಶೇ.2ರಷ್ಟು ಎಂದು ರಾಜ್ಯ ಸರಕಾರವೇ ಹೇಳುತ್ತಿದೆ. ಹಾಗಾದರೆ ರಾಜ್ಯದ 1 ಲಕ್ಷ ಕೋಟಿ ರೂ. ಮೌಲ್ಯದ ಸಂಪತ್ತಿನ ಉತ್ತರದಾಯಿತ್ವವನ್ನು ರಾಜ್ಯದ ಜನರು ಕೇಳಬೇಕಲ್ಲವೇ? ಎಂಬ ಪ್ರಶ್ನೆ ಈಗ ಮೂಡಿದೆ.

2006ರಿಂದ 2009ರ ಡಿಸೆಂಬರ್‌ವರೆಗೆ ರಾಜ್ಯದಲ್ಲಿ ಒಟ್ಟು 12,891 ಅಕ್ರಮ ಗಣಿಗಾರಿಕೆ ಪ್ರಕರಣಗಳು ವರದಿಯಾಗಿದ್ದವು. 2010-2011ರ ಒಂದೇ ವರ್ಷದಲ್ಲಿ 6,476 ಪ್ರಕರಣ ದಾಖಲಾದವು. ಹೀಗಾಗಿ 2010ರಲ್ಲಿ ಗಣಿ ಹಗರಣಗಳನ್ನು ವಿವಿಧ ತನಿಖಾ ಸಂಸ್ಥೆಗಳು ತನಿಖೆ ಆರಂಭಿಸಿದವು.

ಆಗಿನ ಲೋಕಾಯುಕ್ತ ನ್ಯಾ.ಸಂತೋಷ್‌ ಹೆಗ್ಡೆ ಸರಕಾರವನ್ನೇ ಎದುರು ಹಾಕಿಕೊಂಡು 3 ಕೋಟಿ ಟನ್ ಅದಿರು ಕದ್ದ ಲೆಕ್ಕ ಸಾರ್ವಜನಿಕಗೊಳಿಸಿದ್ದರು. ಅದರ ಮೊತ್ತವೇ 12,228 ಕೋಟಿ ರೂ. ಅಂದರೆ ಆಗಿನ ರೂಪಾಯಿ ಮೌಲ್ಯಕ್ಕೆ ಹೋಲಿಸಿದರೆ ಈಗ 50 ಸಾವಿರ ಕೋಟಿ ರೂ. ದಾಟುತ್ತದೆ.

ದಕ್ಷ ಅಧಿಕಾರಿ ಡಾ.ಯು.ವಿ.ಸಿಂಗ್ ನೇತೃತ್ವದ ತಂಡ ಅಕ್ರಮ ಗಣಿಗಾರಿಕೆಯ ಇಂಚಿಂಚೂ ಮಾಹಿತಿಯನ್ನು ಸಂಗ್ರಹಿಸಿದ್ದರು. ಕಳೆದ 20 ವರ್ಷಗಳ ಸನಿಹದಲ್ಲೂ ಅನೇಕ ಪ್ರಕರಣಗಳಲ್ಲಿ ವಿಚಾರಣೆಯಲ್ಲೇ ಉಳಿದಿವೆ. ಬೆರಳೆಣಿಕೆಯ ಪ್ರಕರಣದಲ್ಲಿ ಕೆಲ ಪ್ರಭಾವಿಗಳಿಗೆ ಶಿಕ್ಷೆಯೇನೋ ಆಗಿದೆ, ಆದರೆ ಹಣ ಮತ್ತು ರಾಜಕಾರಣ ಇನ್ನೂ ಅನೇಕರನ್ನು ರಕ್ಷಿಸುತ್ತಿವೆ.

2013ರಲ್ಲಿ ತನಿಖೆಗೆ ಸಾಂಸ್ಥಿಕ ರೂಪ: ಅಕ್ರಮ ಗಣಿಗಾರಿಕೆಯಿಂದ ಹೊರಹೊಮ್ಮಿದ ಅಪಾರ ಪ್ರಮಾಣದ ಕಪ್ಪುಹಣ ಕರ್ನಾಟಕದ ರಾಜಕೀಯದ ಮೇಲೂ ಭಾರಿ ಅಡ್ಡ ಪರಿಣಾಮವನ್ನೇ ಬೀರಿತು. 20130 ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾದ ಹಣದ ಪ್ರಮಾಣ ದೇಶಾದ್ಯಂತ ಸುದ್ದಿ ಮಾಡಿತ್ತು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಹೆಚ್‌.ಕೆ.ಪಾಟೀಲ್‌ ನೇತೃತ್ವದಲ್ಲಿ ಸಚಿವ ಸಂಪುಟದ ಉಪ ಸಮಿತಿ ರಚಿಸಿತ್ತು. ಸಮಿತಿ ಶಿಫಾರಸಿನ ಅನ್ವಯ ಎಸ್‌ಐಟಿ ರಚನೆಗೊಂಡು ಅದಿರಿನ ಉತ್ಖನನ, ಸಾಗಾಟ, ರಫ್ತು ಮತ್ತು ಮಾರಾಟದ ಕುರಿತಂತೆ ತನಿಖೆ ಆರಂಭವಾಯಿತು.

ಹೆಚ್‌.ಕೆ.ಪಾಟೀಲ್ ಸಮಿತಿಯು ಗಣಿಗಾರಿಕೆಯಿಂದ ಲೂಟಿಯಾದ ಸಂಪತ್ತನ್ನು ಸರಕಾರವೇ ಮುಟ್ಟಗೋಲು ಹಾಕಿಕೊಳ್ಳಬೇಕು. ಎಸ್‌ಐಟಿ ಹೊರತಾದ ನ್ಯಾಯಿಕ ಸಂಸ್ಥೆಗೆ ನೀಡಬೇಕೆಂದು ಕ್ರಿಮಿನಲ್ ಲಾ ಬಳಕೆಗೆ ಶಿಫಾರಸು ಮಾಡಿತ್ತು. ಆದರೆ ಸರಕಾರ ವಸೂಲಾತಿ ಮಾಡಲಿಲ್ಲ.

ಒಂದು ಪತ್ರ, ಹಲವು ಪರಿಣಾಮ!: 2018ರ ನಂತರ ತನಿಖೆ ಆಮೆಗತಿಗೆ ಜಾರಿದವು. 2018ರಿಂದ 2023ರ ಅವಧಿಯಲ್ಲಿ ‘ಬಿ’ ರಿಪೋರ್ಟ್ ಹಾಕಿದ ಪ್ರಕರಣಗಳನ್ನು ಕೆದಕಿದರೆ ಅದರ ತನಿಖೆಗೆ ಇನ್ನೊಂದು ಎಸ್‌ಐಟಿಯನ್ನೇ ರಚಿಸಬೇಕಾಗುತ್ತದೆ. 2023ರಲ್ಲಿ ಮತ್ತೆ ಸರಕಾರ ಬದಲಾಯಿತು.

ಗಣಿ ತನಿಖೆಗೆ ಮರುಜೀವ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಆದರೆ ವರ್ಷದವರೆಗೆ ಯಾವುದೇ ಪ್ರಗತಿ ಆಗಲಿಲ್ಲ. ಕಳೆದ ಜೂ.20ರಂದು ಮತ್ತೆ ತಮ್ಮದೇ ಸರಕಾರಕ್ಕೆ ಬಹಿರಂಗ ಪತ್ರ ಬರೆದ ಸಚಿವ ಹೆಚ್.ಕೆ.ಪಾಟೀಲ್, ಅಕ್ರಮ ಗಣಿಗಾರಿಕೆ ಕುರಿತು ಸರಕಾರ ಆಸಕ್ತಿ ಕಳೆದುಕೊಂಡ ಬಗ್ಗೆ ನೇರ ಆಕ್ಷೇಪ ಎತ್ತಿದರು. ಪರಿಣಾಮ ಮತ್ತೊಮ್ಮೆ ಸಂಪುಟ ಸಮಿತಿ ರಚನೆ ಆಯಿತು. ಕಳೆದ 2 ತಿಂಗಳಲ್ಲಿ ಗಣಿ ತನಿಖೆಯ ಹಾದಿ ಬೇರೊಂದು ಗತಿಯಲ್ಲೇ ಮುನ್ನಡೆಯುತ್ತಿದೆ.

ಉತ್ತರದಾಯಿತ್ವ ಬೇಕಲ್ಲವೆ?: ಕರ್ನಾಟಕದ ಇತಿಹಾಸದಲ್ಲೇ ಬಹುದೊಡ್ಡ ಹಗರಣದ ಕುಖ್ಯಾತಿ ಹೊಂದಿರುವ ಕಬ್ಬಿಣದ ಅದಿರಿನ ಅಕ್ರಮ ಗಣಿಗಾರಿಕೆಗೆ ಈಗ 20 ವರ್ಷ ತುಂಬುತ್ತಿದೆ. ಸರಿಸುಮಾರು 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಾಜ್ಯದ ಸಂಪತ್ತು ವಸೂಲಿ ಮಾಡುವ ಬಹುದೊಡ್ಡ ಸವಾಲು ರಾಜ್ಯ ಸರಕಾರದ ಮುಂದಿದೆ. ರಾಜ್ಯದ ಜನತೆ ಸರಕಾರ ದಿಂದ ಉತ್ತರದಾಯಿತ್ವ ಬಯಸುತ್ತಿದ್ದಾರೆ. ಪಕ್ಷಗಳು ಬದಲಾದರೆ ಕಾನೂನು ಬದಲಾಗುತ್ತದೆಯೇ? ಎಂಬ ಜಿಜ್ಞಾಸೆ ಜನರನ್ನು ಕಾಡುತ್ತಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version