Home ತಾಜಾ ಸುದ್ದಿ ಭಾರತಕ್ಕೂ ಭೂಕಂಪದ ಭೀತಿ: ತಜ್ಞರಿಂದ ಎಚ್ಚರಿಕೆ

ಭಾರತಕ್ಕೂ ಭೂಕಂಪದ ಭೀತಿ: ತಜ್ಞರಿಂದ ಎಚ್ಚರಿಕೆ

0

ನವದೆಹಲಿ: ನೆರೆಯ ಮ್ಯಾನ್ಮಾರ್ ಹಾಗೂ ಥ್ಲಾಯೆಂಡ್ ದೇಶಗಳಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪದಿಂದ ೨೭೦೦ಕ್ಕೂ ಹೆಚ್ಚು ಜನರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಅದೇ ತೆರನಾದ ಭೀಕರ ಭೂಕಂಪ ಭಾರತದಲ್ಲೂ ಸಂಭವಿಸುವ ಸಾಧ್ಯತೆಗಳಿವೆ ಎಂದು ಭೂಗರ್ಭ ಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ಅಂತಹ ಪರಿಸ್ಥಿತಿ ಉಂಟಾದರೆ ಅತಿ ಜನಸಾಂದ್ರತೆಯ ದೆಹಲಿ ಹಾಗೂ ಗುವಾಹತಿಯಂತಹ ನಗರಗಳಲ್ಲಿ ಮ್ಯಾನ್ಮಾರ್‌ನಲ್ಲಿ ಆಗಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಸಾವು ನೋವು ಸಂಭವಿಸಬಹುದು, ಭಾರತ ಈಗ ಅಂತಹ ಅಪಾಯ ಎದುರಿಸುವುದಕ್ಕೆ ಪೂರ್ಣರೀತಿಯಿಂದ ಸಜ್ಜಾಗಿಲ್ಲ ಎಂದು ತಜ್ಞರು ವಿವರಿಸುತ್ತಾರೆ. ಮ್ಯಾನ್ಮಾರ್‌ನಲ್ಲಿ ಸಾಗಿಂಗ್ ಭಾಗದುದ್ದಕ್ಕೂ ಸಮತಲ ಚಲನೆಯಿಂದ ಭೂಕಂಪ ಸಂಭವಿಸಿದೆ. ಭೂಮಿಯ ಬೃಹತ್ ಭೂಪ್ರದೇಶಗಳು ಪರಸ್ಪರ ಅಡ್ಡಲಾಗಿ ಜಾರಿರುವಂತೆ ಕಂಡುಬರುತ್ತಿತ್ತು.
ತಜ್ಞರ ಪ್ರಕಾರ, ತೀವ್ರ ಸ್ವರೂಪದ ಭೂಕಂಪದಿಂದ ಭೂಭಾಗದಲ್ಲಿ ಭಾರಿ ಅಲುಗಾಟ ಉಂಟಾಗುವುದಲ್ಲದೆ ಗೋಚರಕ್ಕೆ ಬರುವ ಹಾನಿ ಕಂಡುಬರುತ್ತದೆ. ಕ್ಯಾಲಿಫೋರ್ನಿಯಾ ಹಾಗೂ ಮ್ಯಾನ್ಮಾರ್‌ನಲ್ಲೂ ಅದೇ ತೆರನಾದ ಭೂಕಂಪಗಳು ಸಂಭವಿಸಿವೆ. ಭಾರತ ಈಗ ವಿಶ್ವದಲ್ಲೇ ಅತಿಹೆಚ್ಚಿನ ಭೂಕಂಪಪೀಡಿತ ವಲಯದಲ್ಲಿದೆ. ಭಾರತೀಯ ಭೂಖಂಡ ಹಾಗೂ ಯುರೋಷಿಯಾ ಟೆಕ್ಟೋನಿಕ್ ಪದರಗಳು ಒಟ್ಟಿಗೆ ಅಪ್ಪಳಿಸಿದಾಗ ಹಿಮಾಲಯದ ಕೆಳಗೆ ಅಗಾಧ ಒತ್ತಡ ಉಂಟಾಗುತ್ತದೆ.
ಹಿಮಾಲಯ ವಲಯದಲ್ಲೀಗ ೮ಕ್ಕೂ ಹೆಚ್ಚು ತೀವ್ರತೆಯ ಭೂಕಂಪ ಸಂಭವಿಸುವ ಸಾಧ್ಯತೆ ಇದೆ. ಇಂತಹ ಭೂಕಂಪ ಉಂಟಾದಲ್ಲಿ ಅದು ಭಾರೀ ವಿನಾಶಕಾರಿಯಾಗಲಿದೆ. ಈಶಾನ್ಯ ಭಾರತದಲ್ಲಿ ಈಗ ಭಾರತದ ಭೂಪದರಗಳು ಸುಂದಾ ಹಾಗೂ ಬರ್ಮಾ ಭೂಪದರಗಳ ಕಳಗೆ ಜಾರುತ್ತಿವೆ. ಇದು ಬಹಳ ದೊಡ್ಡ ಪ್ರಮಾಣದಲ್ಲಿ ಘಟಿಸಿದ್ದಲ್ಲಿ ಭೂಕಂಪ ಮಾತ್ರವಲ್ಲದೆ ಸುನಾಮಿ ಅಲೆಗಳೂ ಕಂಡುಬರುವ ಅಪಾಯವಿದೆ. ಆ ರೀತಿಯ ಭೂಕಂಪದಿಂದ ಭಾರತದ ಕೇಂದ್ರ ಭಾಗ ಹಾಗೂ ದ್ವೀಪಕಲ್ಪದ ಪ್ರದೇಶಗಳಿಗೂ ಅಪಾಯ ಉಂಟಾಗಲಿದೆ. ೧೯೯೩ರ ಲಾತೂರ್ ಭೂಕಂಪವೂ ಇದೇ ತೆನಾದ ಪರಿಣಾಮದಿಂದ ಉಂಟಾಗಿದ್ದವು.

Exit mobile version