ನವದೆಹಲಿ: ರಾಷ್ಟ್ರ ರಾಜಧಾನಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGIA) ಭಾನುವಾರ ಮಧ್ಯಾಹ್ನ ಎಂಥವರ ಎದೆಯಲ್ಲೂ ನಡುಕ ಹುಟ್ಟಿಸುವ ಘಟನೆಯೊಂದು ನಡೆದಿದೆ. ಪೈಲಟ್ ಅಥವಾ ಕಂಟ್ರೋಲ್ ರೂಂ ಸಿಬ್ಬಂದಿಯ ನಿರ್ಲಕ್ಷ್ಯವೋ ಅಥವಾ ಗೊಂದಲವೋ ಗೊತ್ತಿಲ್ಲ, ಕೂದಲೆಳೆ ಅಂತರದಲ್ಲಿ ಭಾರಿ ವಿಮಾನ ದುರಂತವೊಂದು ತಪ್ಪಿದ್ದು, ನೂರಾರು ಪ್ರಯಾಣಿಕರು ಮರುಜೀವ ಪಡೆದಿದ್ದಾರೆ.
ಆಗಿದ್ದೇನು?: ಭಾನುವಾರ ಮಧ್ಯಾಹ್ನ 12:07ರ ಸುಮಾರಿಗೆ ಅಫ್ಘಾನಿಸ್ತಾನದ ಕಾಬೂಲ್‌ನಿಂದ ದೆಹಲಿಗೆ ಬಂದಿದ್ದ ‘ಅರಿಯಾನಾ ಅಫ್ಘಾನ್ ಏರ್‌ಲೈನ್ಸ್’ನ (FG 311) ವಿಮಾನವು ಲ್ಯಾಂಡಿಂಗ್ ಆಗುವಾಗ ದೊಡ್ಡ ಎಡವಟ್ಟು ಮಾಡಿಕೊಂಡಿದೆ.
ವಿಮಾನ ನಿಲ್ದಾಣದ ನಿಯಮದ ಪ್ರಕಾರ, ‘ರನ್‌ವೇ 29R’ ಅನ್ನು ಕೇವಲ ವಿಮಾನಗಳು ಮೇಲೇರಲು (Take-off) ಮತ್ತು ‘ರನ್‌ವೇ 29L’ ಅನ್ನು ವಿಮಾನಗಳು ಇಳಿಯಲು (Landing) ಮೀಸಲಿಡಲಾಗಿದೆ. ಆದರೆ, ಅಫ್ಘಾನ್ ಪೈಲಟ್ ವಿಮಾನವನ್ನು ಲ್ಯಾಂಡಿಂಗ್ ರನ್‌ವೇಗೆ ಕೊಂಡೊಯ್ಯುವ ಬದಲು, ನೇರವಾಗಿ ಟೇಕಾಫ್‌ಗೆ ಮೀಸಲಾಗಿದ್ದ ರನ್‌ವೇ 29R ನಲ್ಲೇ ಇಳಿಸಿದ್ದಾರೆ.
ಅದೃಷ್ಟ ಕೈಬಿಡಲಿಲ್ಲ: ಅದೃಷ್ಟವಶಾತ್, ಅಫ್ಘಾನ್ ವಿಮಾನ ತಪ್ಪು ರನ್‌ವೇಯಲ್ಲಿ ಇಳಿಯುವ ಸಮಯದಲ್ಲಿ, ಅದೇ ರನ್‌ವೇಯಲ್ಲಿ ಯಾವುದೇ ವಿಮಾನ ಟೇಕಾಫ್ ಆಗಲು ಸಿದ್ಧವಿರಲಿಲ್ಲ ಅಥವಾ ರನ್‌ವೇ ಮಧ್ಯದಲ್ಲಿ ಇರಲಿಲ್ಲ.
ಒಂದು ವೇಳೆ ಎದುರಿನಿಂದ ಬೇರೆ ವಿಮಾನ ವೇಗವಾಗಿ ಟೇಕಾಫ್‌ಗೆ ಬರುತ್ತಿದ್ದರೆ, ಎರಡು ವಿಮಾನಗಳು ಮುಖಾಮುಖಿ ಡಿಕ್ಕಿಯಾಗಿ ದೊಡ್ಡ ರಕ್ತಚರಿತ್ರೆಯೇ ನಡೆದುಹೋಗುತ್ತಿತ್ತು. ದೇವರ ದಯೆಯಿಂದ ಸಂಭವಿಸಬಹುದಾಗಿದ್ದ ಮಹಾ ಅನಾಹುತ ತಪ್ಪಿದೆ.
ತನಿಖೆಗೆ ಆದೇಶ: ಸಾಮಾನ್ಯವಾಗಿ ಗಾಳಿಯ ದಿಕ್ಕು ಮತ್ತು ದಟ್ಟಣೆಯನ್ನು ನೋಡಿಕೊಂಡು ಎಟಿಸಿ ಅಧಿಕಾರಿಗಳು ಸಾಂದರ್ಭಿಕವಾಗಿ ರನ್‌ವೇ ಬದಲಾವಣೆ ಮಾಡುತ್ತಾರೆ. ಆದರೆ ಇಲ್ಲಿ ಪೈಲಟ್‌ಗೆ ತಪ್ಪು ಮಾಹಿತಿ ರವಾನೆಯಾಯಿತೇ? ಅಥವಾ ಪೈಲಟ್ ಎಟಿಸಿ ಸೂಚನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಪ್ರಮಾದ ಎಸಗಿದರೇ? ಎಂಬುದು ಇನ್ನೂ ನಿಗೂಢವಾಗಿದೆ.
ಈ ಗಂಭೀರ ಸುರಕ್ಷತಾ ಲೋಪದ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತೀವ್ರ ತನಿಖೆಗೆ ಆದೇಶಿಸಿದೆ. ಅಧಿಕಾರಿಗಳು ಪೈಲಟ್ ಮತ್ತು ಎಟಿಸಿ ನಡುವಿನ ಸಂಭಾಷಣೆಯ ರೆಕಾರ್ಡ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ದೆಹಲಿಯಂತಹ ಜನನಿಬಿಡ ನಿಲ್ದಾಣದಲ್ಲಿ ಇಂತಹ ಸಣ್ಣ ನಿರ್ಲಕ್ಷ್ಯವೂ ಸಾವಿರಾರು ಪ್ರಾಣಗಳಿಗೆ ಕುತ್ತು ತರಬಲ್ಲದು ಎಂಬ ಆತಂಕ ವ್ಯಕ್ತವಾಗಿದೆ.
