ಪಣಜಿ: ಗೋವಾದ ಪರ್ತಗಾಳಿ ಮಠದಲ್ಲಿ 550 ನೇ ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ಕಾವಿ ಕಲೆಯ ಮೂಲಕ ಮಠದ ಪ್ರಮುಖ ಸ್ಥಳಗಳಲ್ಲಿ ಚಿತ್ರಿಸಲಾಗಿದೆ. ಸಾಮಾನ್ಯವಾಗಿ ಜನ ಇದನ್ನು ಕೇವಲ ಪೇಂಟಿಂಗ್ ಅಂತ ತಿಳಿದುಕೊಳ್ಳಬಹುದು. ಆದರೆ ಇದು ಪೇಂಟಿಂಗ್ ಅಲ್ಲ. ಸುಣ್ಣದ ಗೋಡೆಯ ಮೇಲೆ ಕೆಮ್ಮಣ್ಣು ಹಚ್ಚಿ ನಂತರ ಕೆತ್ತನೆಯ ಮೂಲಕ ಸುಣ್ಣದ ಬಿಳಿ ಬಣ್ಣವನ್ನು ಕಾಣುವಂತೆ ಮಾಡಲಾಗುತ್ತದೆ. ಇಂತಹ ಸುಂದರ ಕಲೆಯ ಚಿತ್ರವನ್ನು ಇಡೀ ಮಠದ ಸುತ್ತ ಕೆತ್ತನೆ ಮಾಡಿರುವುದು ಅತ್ಯಾಕರ್ಷಣೀಯವಾಗಿ ಕಂಡುಬರುತ್ತಿದೆ.
ಪರ್ತಗಾಳಿ ಮಠದಲ್ಲಿ ಸಮುದ್ರ ಮಂಥನ ಮತ್ತು ಗಜೇಂದ್ರ ಮೋಕ್ಷದ ಕಾವಿ ಕಲೆಯ ಚಿತ್ರಗಳು ಮುಂಭಾಗದಲ್ಲಿ ಕಂಡುಬರುತ್ತದೆ. ಇಂತ್ರಕಾಂತ ಭವನದಲ್ಲಿ ಮಧ್ವಾಚಾರ್ಯರು ಮತ್ತು ವಿಶೌಂಭರ ಗಣಪತಿ ಚಿತ್ರಗಳು ಕಾವಿ ಕಲೆಯಲ್ಲಿ ಮೂಡಿಬಂದಿದೆ. ಅಲ್ಲಿಯೇ ಎಡ ಭಾಗದಲ್ಲಿ ಕಾಳಿಂಗ ಮರ್ಧನ ಮತ್ತು ಗೋವರ್ಧನ ಗಿರಿಧಾರಿಯ ಸನ್ನಿವೇಶವನ್ನು ಇದೇ ಕಾವಿ ಕಲೆಯಲ್ಲಿ ಚಿತ್ರಿಸಲಾಗಿದೆ.
ಪರ್ತಗಾಳಿ ಮಠದ ಇಡೀ ಸನ್ನಿವೇಶ ಕಾವಿ ಕಲೆಯಲ್ಲಿ ಚಿತ್ರಿಸಲಾಗಿರುವ ಕಾಮಧೇನು ಮತ್ತು ವಠ ವೃಕ್ಷದ ಕಥೆಯೊಂದಿಗೆ ಆರಂಭಗೊಳ್ಳುತ್ತದೆ. ಮುಂದೆ ಲಕ್ಷ್ಮೀಯ ಚಿತ್ರ, ಯಜ್ಞ ಶಾಲೆಯಲ್ಲಿ ಯಜ್ಞನಾರಾಯಣನ ಚಿತ್ರ, ವೀರವಿಠ್ಠಲ ಮಂದಿರದಲ್ಲಿ ದ್ವಾರಪಾಲಕರಾದ ಜಯ ವಿಜಯರನ್ನು ಕಾವಿ ಕಲೆಯಲ್ಲಿ ಚಿತ್ರಿಸಲಾಗಿದೆ. ಶೇಷಶಾಹಿ ವಿಷ್ಣುವಿನ ಚಿತ್ರ ಕೂಡ ಕಾವಿ ಕಲೆಯಲ್ಲಿ ಸುಂದರವಾಗಿ ಮೂಡಿಬಂದಿದೆ.
