ಬೆಟ್ಟಿಂಗ್ ದಂಧೆಗೆ ಪೊಲೀಸರ ಕುಮ್ಮಕ್ಕು

ಕೋಲಾರ: ಮುಳಬಾಗಿಲು ಮತ್ತು ಕೋಲಾರದಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಬೆಟ್ಟಿಂಗ್ ದಂಧೆಗೆ ಯುವಕರು ಬಲಿಯಾಗಿದ್ದಾರೆ. ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ. ಬೈಕ್, ಮನೆ ಮಾರಿಕೊಂಡಿರುವ ಉದಾಹರಣೆಗಳೂ ಇವೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಬೆಟ್ಟಿಂಗ್ ದಂಧೆ ಕುರಿತು ಇಂಚಿಂಚೂ ಮಾಹಿತಿ ಪೊಲೀಸರಿಗೆ ಗೊತ್ತಿದೆ. ಪೊಲೀಸರೇ ಅವರನ್ನು ಬಿಟ್ಟು ಬಿಟ್ಟಿದ್ದಾರೆ ಎಂದು ಪೊಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದರು.
ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿಗಣತಿ ಮಾಡಲು ತೆಗೆದುಕೊಂಡಿರುವ ನಿರ್ಧಾರ ಒಳ್ಳೆಯದು. ದೇಶದಲ್ಲಿ ಯಾವ ಯಾವ ಸಮುದಾಯಗಳ ಜನಸಂಖ್ಯೆ ಎಷ್ಟಿದೆ ಇದೆ ಎಂಬುದು ತಿಳಿದುಕೊಂಡರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಸ್ವಾಗತಿಸಿದರು. ಕೇಂದ್ರ ಸರ್ಕಾರದ ನಿರ್ಧಾರ ಶ್ಲಾಘನೀಯ. ಹತ್ತು ವರ್ಷಕ್ಕೊಮ್ಮೆ ಜಾತಿಗಣತಿ ಮಾಡುವುದು ಉತ್ತಮ ಎಂದು ತಿಳಿಸಿದರು.
ಪಹಲ್ಗಾಮದಲ್ಲಿ ಭಯೋತ್ಪಾದಕ ದಾಳಿ ಘೋರವಾದ ವಿಚಾರ. ಇಷ್ಟು ದಿನ ಕಳೆದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಮಂಜಸವಲ್ಲ, ಸುಮ್ಮನೆ ಯುದ್ಧ ವಿಮಾನಗಳನ್ನು ಆಕಾಶದಲ್ಲಿ ಚಾಲನೆ ಮಾಡಿಕೊಂಡು ದೇಶದ ಜನತೆಗೆ ಪ್ರದರ್ಶನ ಮಾಡುತ್ತಿದ್ದಾರೆ ಅಷ್ಟೆ ಎಂದು ಕಿಡಿಕಾರಿದರು.
ನಮ್ಮ ದೇಶದಿಂದ ಪಾಕಿಸ್ತಾನಕ್ಕೆ ಹರಿಯುತ್ತಿರುವ ಸಿಂಧೂ ನದಿಯ ನೀರನ್ನು ನಿಲ್ಲಿಸುವುದು ಸಾಧ್ಯವೇ? ನದಿ ನೀರನ್ನು ನಿಲ್ಲಿಸಲು ಬೃಹತ್‌ ಅಣೆಕಟ್ಟು ಕಟ್ಟಬೇಕು. ಇದೆಲ್ಲ ಕೇಂದ್ರ ಸರ್ಕಾರದ ಗಿಮಿಕ್ ಎಂದು ಟೀಕಿಸಿದರು.