ರವಿ ನಾಯಕ್
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಉತ್ತಮ ಮಳೆಯಾಗುತ್ತಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ ಬಿತ್ತನೆ ಬೀಜಗಳ ದರ ಮಾತ್ರ ಗಗನಕ್ಕೇರಿದ್ದು ಶೇ. ೬೦ರಷ್ಟು ಬೆಲೆ ಹೆಚ್ಚಳವಾಗಿದೆ.
ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ತಿಂಗಳ ಮುಂಚಿತವಾಗಿಯೇ ಮಳೆಯ ಮೂನ್ಸೂಚನೆ ದೊರೆತಿದ್ದು ವಿವಿಧ ಕಡೆ ರೈತರು ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಕಳೆದ ವರ್ಷ ಮಳೆ ಕೊರತೆಯಿಂದ ಬೀಜೋತ್ಪನ್ನ ಪ್ರಮಾಣ ತೀವ್ರ ಕಡಿಮೆಯಾಗಿತ್ತು. ಇದರ ಪರಿಣಾಮ ಈ ವರ್ಷ ಬೀಜಗಳ ಬೆಲೆ ಮಾತ್ರ ರೈತರಿಗೆ ಕೈಗೆಟಕುವ ದರದಲ್ಲಿ ದೊರೆಯುವುದು ಕಷ್ಟಕರವಾಗಿದೆ. ಹೆಸರು, ಸೋಯಾಬೀನ್, ತೊಗರಿ, ಎಳ್ಳು, ಮಕ್ಕೆಜೋಳ, ಹತ್ತಿ ಸೇರಿದಂತೆ ಇತರೆ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತದೆ. ಆದರೆ, ಏರಿಕೆಯಾಗಿರುವ ಬೀಜದ ಬೆಲೆ ನಿಯಂತ್ರಣ ಇಲ್ಲದಂತಾಗಿದೆ.
ರೈತ ಸಂಪರ್ಕ ಕೇಂದ್ರ: ಮುಂಗಾರು ಮಳೆ ಪ್ರಾರಂಭಕ್ಕೂ ಮುನ್ನ ರಾಜ್ಯ ಸರ್ಕಾರ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ, ಗೊಬ್ಬರ ದಾಸ್ತಾನು ಮಾಡಿರುತ್ತದೆ. ಆದರೆ, ಈಗಾಗಲೇ ರೈತರ ಸಂಪರ್ಕ ಕೇಂದ್ರಗಳಿಗೆ ಹೋಗುತ್ತಿರುವ ರೈತರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಹೆಸರು ಬೀಜ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೆ.ಜಿ.ಗೆ ೧೦೦ ರೂಪಾಯಿ ಹೆಚ್ಚಳವಾಗಿದೆ. ರೈತ ಸಂಪರ್ಕ ಕೇಂದ್ರದಲ್ಲಿ ೫ ಕೆ.ಜಿ.ಪ್ಯಾಕೇಟ್ ಹೆಸರು ೨೦೨೩ರಲ್ಲಿ ೫೦೦ ರೂ. ಇತ್ತು. ಈ ವರ್ಷ ೮೫೦ ರೂ. ಏರಿಕೆಯಾಗಿದೆ.
ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ದೊರೆಯಬೇಕಾದ ಬಿತ್ತನೆ ಬೀಜದ ದರಲ್ಲಿ ಹೆಚ್ಚಳವಾಗಿರುವ ಪರಿಣಾಮ, ಮಾರುಕಟ್ಟೆಯಲ್ಲಿ ರಿಟೇಲ್ ದರ ಮಾತ್ರ ೧೦೦ ರಷ್ಟು ಬೆಲೆ ಏರಿಕೆ ಮಾಡಿದ್ದಾರೆ. ವಿವಿಧ ಕಂಪನಿಗಳ ಬೀಜದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ ಬಹುತೇಕ ರೈತರು ಕೃಷಿ ರೈತ ಸಂರ್ಪಕ ಕೇಂದ್ರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಸರ್ಕಾರದ ರೈತ ಸಂಪರ್ಕ ಕೇಂದ್ರದಲ್ಲಿ ಎಲ್ಲ ತಳಿಯ ಬೀಜಗಳ ಬೆಲೆಯನ್ನು ದ್ವಿಗುಣ ಮಾಡಿದೆ. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಚಟುವಟಿಕೆ ಜೋರಾಗಿರುತ್ತದೆ. ಮಾರುಕಟ್ಟೆಯಲ್ಲಿ ಎಲ್ಲ ಬೀಜಗಳ ಬೆಲೆ ಹೆಚ್ಚಳವಾಗಿವೆ.
ಸರ್ಕಾರ ಸೌಲಭ್ಯ ಅಷ್ಟಕಷ್ಟೇ: ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪರಿಹಾರ ಅಷ್ಟಕ್ಕಷ್ಟೇ. ನಾಲ್ಕು ಎಕರೆ ಜಮೀನು ಉಳುಮೆ ಮಾಡಿ ಬಿತ್ತನೆ ಮಾಡಬೇಕೆಂದರೆ ಕನಿಷ್ಠ ೨೫ ರಿಂದ ೩೦ ಸಾವಿರ ಬೇಕಾಗುತ್ತದೆ. ಆದರೆ, ಸರ್ಕಾರ ಇತ್ತೀಚೆಗೆ ಹೆಕ್ಟೇರ್‌ಗೆ ೩ ಸಾವಿರದಿಂದ ೬ ಸಾವಿರ ರೂ. ಬಿಡುಗಡೆ ಮಾಡಿದೆ. ಬಹುತೇಕ ರೈತರ ಬೆಳೆಸಾದ ಖಾತೆಗೆ ಬರಪರಿಹಾರ ಜಮೆಯಾಗಿದೆ. ಸರ್ಕಾರದಿಂದ ಬಿಡುಗಡೆಯಾಗುವ ಸಹಾಯಧನ ಎರಡು ಚೀಲ ಗೊಬ್ಬರಕ್ಕೆ ಸಾಕಾಗುವುದಿಲ್ಲ ಎನ್ನುತ್ತಿದ್ದಾರೆ ರೈತರು.
ಸಾಲಗಾರರ ಮೊರೆ: ಸತತ ಎರಡು ವರ್ಷ ಬರ, ಅತಿ ವೃಷ್ಟಿಯಿಂದಾಗಿ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಈ ವರ್ಷ ಮುಂಗಾರು ಮಳೆ ಉತ್ತಮ ನಿರೀಕ್ಷೆ ಹುಟ್ಟಿಸಿದೆ. ಆದರೆ, ಮುಂಗಾರು ಬಿತ್ತನೆಗೆ ಬೇಕಾಗುವ ಎಲ್ಲ ಉತ್ಪನ್ನಗಳ ಬೆಲೆ ಹೆಚ್ಚಳವಾಗಿರುವ ಪರಿಣಾಮ ರೈತರು ಮತ್ತೆ ಸಾಲಗಾರರ ಮೊರೆ ಹೋಗಬೇಕಾಗಿ ಬಂದಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಗ್ಯಾರಂಟಿ ಯೋಜನೆಗಳಿಗೆ ರಾಜ್ಯದ ಬೊಕ್ಕಸಕ್ಕೆ ಹಣದ ಕೊರತೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನೂ ಕೃಷಿಗೆ ಬೇಕಾಗುವ ಅಗತ್ಯವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಸರ್ಕಾರಕ್ಕೆ ಕಷ್ಟವಾಗುತ್ತಿದೆ ಎಂಬ ಆರೋಪವಿದೆ.