ಮಂಗಳೂರು: ರೌಡಿ ಶೀಟರ್ ಎಂದು ಗುರುತಿಸಿರುವ ಕಾಂಗ್ರೆಸ್ ಪಕ್ಷದ ಹರೀಶ್ ಎಂಬಾತನನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಸಮಿತಿ ಸದಸ್ಯರಾಗಿ ನೇಮಿಸಲು ಜಿಲ್ಲಾ ಉಸ್ತುವಾರಿ ಸಚಿವರು ಶಿಫಾರಸು ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಶಾಸಕರು ನೀಡಿರುವ ಹೇಳಿಕೆ ವೈರಲ್ ಆಗಿದೆ. ಆದರೆ ಬಿಜೆಪಿಯ ಶಾಸಕರಿಗೆ ರೌಡಿ ಶೀಟರ್‌ಗಳ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಎಂದು ಕಾಂಗ್ರೆಸ್ ದಕ ಜಿಲ್ಲಾ ಅಧ್ಯಕ್ಷ ಕೆ.ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.
ನಗರದಲ್ಲಿರುವ ಜಿಲ್ಲಾ ಕಾಂಗ್ರೆಎಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪ ಮಾಡಿರುವ ಶಾಸಕರ ಪಕ್ಷದ ಸಂಘಟನೆಗಳಲ್ಲಿ ಒಂದು ಚಯರ್ ಸಿಗಬೇಕಾಗಿದ್ದರೂ ರೌಡಿ ಶೀಟರ್ ಆಗುವುದು ಕನಿಷ್ಠ ಅರ್ಹತೆ. ಅವರ ಹೆಸರಿನಲ್ಲಿ ಕೆಲವು ಕೇಸುಗಳು ಆದರೂ ಇರಬೇಕು. ಆರ್‌ಟಿಐ ಕಾರ್ಯಕರ್ತರೋರ್ವರ ಕೊಲೆ ನಡೆಸಿದ ವ್ಯಕ್ತಿ ಶಾಸಕರ ರಾಜಕೀಯ ಸಲಹೆಗಾರ. ಇವರ ಬಲಗೈ ಬಂಟ. ಇವರು ಇತರ ರೌಡಿ ಶೀಟರ್‌ಗಳ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ಕದ್ರಿ ದೇವಸ್ಥಾನದಲ್ಲಿ ಹುಂಡಿಗೆ ಕೈ ಹಾಕಿದ ವ್ಯಕ್ತಿ ಇದೇ ಶಾಸಕರು ನೇಮಿಸಿದ ಟ್ರಸ್ಟಿಯಾಗಿದ್ದಾರೆ. ಅವರು ತಮ್ಮ ತಟ್ಟೆಯಲ್ಲಿ ಸತ್ತು ಬಿದ್ದಿರುವ ಹೆಗ್ಗಣವನ್ನು ಬಿಟ್ಟು ಉಳಿದವರ ತಟ್ಟೆಯನ್ನು ತೋರಿಸುತ್ತಿದ್ದಾರೆ. ಶಾಸಕರು ಆರೋಪಿಸಿರುವ ಕಾಂಗ್ರೆಸ್‌ನ ಹರೀಶ್ ದೇವಸ್ಥಾನದ ಕಟ್ಟಡದಲ್ಲಿ ಅಂಗಡಿ ಬಾಡಿಗೆ ತೆಗೆದು ಸಮಸ್ಯೆಯಿಂದ ಆರಂಭದಲ್ಲಿ ಬಾಡಿಗೆ ಪಾವತಿಸಿರಲಿಲ್ಲ. ಆದರೆ ಬಳಿಕ ಪೂರ್ಣ ೯ ಲಕ್ಷ ರೂ ಬಾಡಿಗೆ ಪಾವತಿಸಿದ್ದಾರೆ. ಹರೀಶ್ ಕುಮಾರ್ ಹೆಸರು ಒಂದು ಕಾಲದಲ್ಲಿ ರೌಡಿ ಶೀಟರ್‌ಗಳ ಪಟ್ಟಿಯಲ್ಲಿ ಇದ್ದದ್ದು ಕೂಡ ನಿಜ. ಆದರೆ ೧೨ ವರ್ಷಗಳ ಹಿಂದೆಯೇ ರೌಡಿ ಶೀಟರ್ ಪಟ್ಟಿಯಿಂದ ಹರೀಶ್ ಅವರ ಹೆಸರು ಕೈಬಿಡಲಾಗಿದೆ. ಬಳಿಕ ಅವರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇದು ಅವರಲ್ಲಿ ಆಗಿರುವ ಬದಲಾವಣೆಗೆ ಸಾಕ್ಷಿ ಎಂದವರು ವಿವರಿಸಿದರು.
ಉಸ್ತುವಾರಿ ಸಚಿವರು ಕ್ಲಬ್ ನಡೆಸಲು ಮುಂದಾಗಿದ್ದಾರೆಯೇ ಎಂದು ಶಾಸಕರು ಪ್ರಶ್ನಿಸಿದ್ದಾರೆ. ಶಾಸಕರ ಆಪ್ತರು ಎಷ್ಟು ಮಂದಿ ಇಸ್ಪೀಟು ಕ್ಲಬ್ ನಡೆಸುತ್ತಿದ್ದಾರೆ ಎಂದು ಅವರ ಜತೆ ಬಹಿರಂಗ ಚರ್ಚೆಗೆ ಸಿದ್ದವಾಗಿರುವುದಾಗಿ ಅವರು ಹೇಳಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಳೀಯರು ಎಲ್ಲ ವಿಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇವಸ್ಥಾನಗಳನ್ನು ನಿರ್ವಹಿಸುವುದು ತುಂಬಾ ಹಿಂದಿನಿಂದಲೂ ನಡೆಯುತ್ತಾ ಬಂದಿರುವುದು. ಆದರೆ ಬಿಎಸ್ವೈ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇವಸ್ಥಾನಗಳ ಆಡಳಿತ ಸಮಿತಿಗೆ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ನೇಮಿಸುವ ಮೂಲಕ ದೇವಸ್ಥಾನಗಳಿಗೆ ಪ್ರಥಮ ಬಾರಿಗೆ ರಾಜಕೀಯ ಪ್ರವೇಶ ಮಾಡಿತು. ಬಳಿಕ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಇದು ಮುಂದುವರಿಯಿತು ಎಂದು ಅವರು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಪದ್ಮರಾಜ್, ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮುಖಂಡರಾದ ಜಾಕಿಂ, ವಿಕಾಸ್, ಕಿರಣ್ ಉಪಸ್ಥಿತರಿದ್ದರು.