- * ಫ್ಲೆಕ್ಸ್-ಬ್ಯಾನರ್ ಗಳಿಂದ ರಾರಾಜಿಸುತ್ತಿದೆ ನಗರ
- * ಯಾತ್ರೆಯಲ್ಲಿ 25 ಸಾವಿರ ಜನರು ಸೇರುವ ನಿರೀಕ್ಷೆ
ದಾವಣಗೆರೆ: ಮಧ್ಯ ಕರ್ನಾಟಕದ ಕೇಂದ್ರ ಬಿಂದು ಬೆಣ್ಣೆನಗರಿಯಲ್ಲಿ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಹಾಗೂ ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣ ವಿರೋಧಿಸಿ ನಾಳೆ ಕೈಗೊಂಡಿರುವ ಜನಾಕ್ರೋಶ ಯಾತ್ರೆಗೆ ಬಿಜೆಪಿ ಜಿಲ್ಲಾ ಘಟಕ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.
ನಗರದ ಜಯದೇವ ವೃತ್ತದ ಬಳಿಯಿರುವ ಬ್ರಾಹ್ಮಣ ವಿದ್ಯಾರ್ಥಿ ನಿಲಯ ಮುಂಭಾಗದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಹೊರ ವಲಯದ ಅಪೂರ್ವ ರೆಸಾರ್ಟ್ ಬಳಿ ಏ. 21ರಂದು ಬೆಳಗ್ಗೆ 10 ಗಂಟೆಗೆ ಆಗಮಿಸಲಿದೆ. ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಶಾಸಕ ಬಿ.ಪಿ.ಹರೀಶ್ ನೇತೃತ್ವದಲ್ಲಿ ಪಕ್ಷದ ಮಾಜಿ ಶಾಸಕರು, ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಲಿದ್ದಾರೆ. ಬಳಿಕ ಅಂಬೇಡ್ಕರ್ ವೃತ್ತಕ್ಕೆ ಯಾತ್ರೆ ತಲುಪಿದಾಗ, ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುತ್ತದೆ. ನಂತರ ಬಹಿರಂಗ ಸಮಾವೇಶ ಮುಗಿದ ಬಳಿಕ ಜಯದೇವ ವೃತ್ತ, ಅಶೋಕ ರಸ್ತೆ, ಮಹಾತ್ಮ ಗಾಂಧೀಜಿ ವೃತ್ತ, ಪಿ.ಬಿ.ರಸ್ತೆ ಮೂಲಕ ಉಪವಿಭಾಗಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ. ಯಾತ್ರೆಯಲ್ಲಿ 25 ಸಾವಿರ ಜನರು ಸೇರುವ ನಿರೀಕ್ಷೆ ಇದೆ.
ರಾರಾಜಿಸುತ್ತಿವೆ ಫ್ಲೆಕ್ಸ್‌ಗಳು:
ಬಹಿರಂಗ ಸಮಾವೇಶ ನಡೆಯುವ ಜಯವೃತ್ತದ ಮಧ್ಯೆ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬೃಹತ್ ಕಟೌಟ್ ಹಾಕಲಾಗಿದೆ. ಮಾತ್ರವಲ್ಲ ಡಾ.ಬಿ.ಆರ್.ಅಂಬೇಡ್ಕರ್ ಅವರ ಬೃಹತ್ ಆದ ಕಟೌಟ್ ಹಾಕಿದ್ದು, ವೃತ್ತದ ಸುತ್ತಮುತ್ತಲ ಪ್ರದೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ರಾಜ್ಯ ನಾಯಕರು, ಸ್ಥಳೀಯ ನಾಯಕರ ಭಾವಚಿತ್ರಗಳ ಫ್ಲೇಕ್ಸ್ ಗಳು ರಾರಾಜಿಸುತ್ತಿವೆ. ಅಷ್ಟೇ ಅಲ್ಲದೇ ನಗರದ ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಫ್ಲೇಕ್ಸ್ ಗಳು, ಪ್ರಮುಖ ನಾಯಕರ, ಸ್ಥಳೀಯ ನಾಯಕರ ಭಾವಚಿತ್ರಗಳನ್ನೊಳಗೊಂಡ ಬ್ಯಾನರ್‌ಗಳು ರಾರಾಜಿಸುತ್ತಿವೆ.