ಮಕರ ಸಂಕ್ರಾಂತಿ ಜನವರಿ ೧೪ರಿಂದ ಆರಂಭವಾಗಿ ಕರ್ಕಾಟಕ ಸಂಕ್ರಾಂತಿಯವರೆಗಿನ ಜುಲೈ ೧೪ರವರೆಗಿನ ಆರು ತಿಂಗಳ ಅವಧಿಯು ಒಂದು ಆಯನವಾಗಿರುತ್ತದೆ. ಈ ಆಯನದಲ್ಲಿ ಸೂರ್ಯನು ಉತ್ತರದ ಕಡೆಗೆ ಚಲಿಸುವುದರಿಂದ ಇದನ್ನು ಉತ್ತರಾಯನ ಎನ್ನುತ್ತಾರೆ. ಈ ಮಕರ ಸಂಕ್ರಾಂತಿಯ ದಿನದಿಂದಲೇ ಸೂರ್ಯನು ಉತ್ತರದ ಕಡೆಗೆ ಪಯಣ ಆರಂಭಿಸುತ್ತಾನೆ. ಕರ್ಕಾಟಕ ಸಂಕ್ರಾಂತಿ ಜುಲೈ ೧೪ರಿಂದ ಆರಂಭವಾಗಿ ಮಕರ ಸಂಕ್ರಾಂತಿಯವರೆಗಿನ ಆರು ತಿಂಗಳ ಅವಧಿಯು ಇನ್ನೊಂದು ಆಯನವಾಗಿರುತ್ತದೆ. ಈ ಆಯನದಲ್ಲಿ ಸೂರ್ಯನು ದಕ್ಷಿಣದ ಕಡೆಗೆ ಚಲಿಸುವುದರಿಂದ ಇದನ್ನು ದಕ್ಷಿಣಾಯನ ಎನ್ನುತ್ತಾರೆ. ಕರ್ಕಾಟಕ ಸಂಕ್ರಾಂತಿ ದಿನದಿಂದ ಸೂರ್ಯನು ದಕ್ಷಿಣದ ಕಡೆಗೆ ಪಯಣ ಆರಂಭಿಸುತ್ತಾನೆ.
ನಮ್ಮ ಒಂದು ವರ್ಷವು ದೇವತೆಗಳಿಗೆ ಒಂದು ದಿನವಾಗಿರುತ್ತದೆ. ದಕ್ಷಿಣಾಯನದ ಸಮಯವು ದೇವತೆಗಳಿಗೆ ರಾತ್ರಿಯಾಗಿದ್ದು ಉತ್ತರಾಯನದ ಸಮಯವು ದೇವತೆಗಳಿಗೆ ಹಗಲು ಆಗಿರುತ್ತದೆ. ಉತ್ತರಾಯನ ಆರಂಭವಾಗುವ ಈ ಮಕರ ಸಂಕ್ರಾಂತಿಯು ದೇವತೆಗಳಿಗೆ ಬೆಳಗಿನ ಸಮಯ ಅಂದರೆ ದೇವತೆಗಳು ನಿದ್ದೆಯಿಂದ ಎದ್ದು ಬಾಗಿಲು ತೆರೆಯುವ ಸಮಯ ಅರ್ಥಾತ್ ಸ್ವರ್ಗದ ಬಾಗಿಲು ತೆರೆಯುವ ಸಮಯವಾಗಿದೆ. ಹೀಗಾಗಿ ಈ ಉತ್ತರಾಯನದಲ್ಲಿ ತೀರಿಕೊಂಡವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬುದು ಹಿಂದುಗಳ ಪ್ರಬಲ ನಂಬಿಕೆಯಾಗಿದೆ. ಅದಕ್ಕಾಗಿಯೇ ಇಚ್ಛಾಮರಣಿಗಳಾದ ಭೀಷ್ಮಾಚಾರ್ಯರು ಉತ್ತರಾಯನ ಬರುವವರೆಗೆ ಶರಮಂಚದ ಮೇಲೆಯೇ ಮಲಗಿ ಕಾದಿದ್ದು ನಂತರ ಪ್ರಾಣ ತ್ಯಾಗ ಮಾಡಿದರು.
ಹಳ್ಳಿಗರಿಗೆ ಮಕರ ಸಂಕ್ರಾಂತಿಯು ಸುಗ್ಗಿಯ ಹಬ್ಬವಾಗಿದೆ. ಈ ದಿನವನ್ನು ಒಂದೊಂದು ಕಡೆ ಒಂದೊಂದು ಹೆಸರಿನಿಂದ ಆಚರಿಸುತ್ತಾರೆ. ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿಯನ್ನು “ಪೊಂಗಲ್ ಹಬ್ಬ” ವೆಂದು ಮೂರು ದಿನಗಳ ಕಾಲ ಆಚರಿಸುತ್ತಾರೆ. ತಮ್ಮ ಬೆಳೆಯ ಮೊದಲ ಕೊಯ್ಲನ್ನು ಮನೆಗೆ ತಂದು ಹೊಸ ಅಕ್ಕಿಯನ್ನು ಹಾಲಿನೊಂದಿಗೆ ಬೇಯಿಸಿ ಒಂದು ಬಗೆಯ ಸಿಹಿ ತಿಂಡಿಯಾದ ಪೊಂಗಲ್" ನ್ನು ತಯಾರಿಸುತ್ತಾರೆ. ಈ ಖಾದ್ಯವನ್ನು ಮೊದಲು ಸೂರ್ಯನಿಗೆ ಅರ್ಪಿಸಿ ನಂತರ ಪ್ರಸಾದ ರೂಪದಲ್ಲಿ ಎಲ್ಲರಿಗೂ ವಿತರಿಸುತ್ತಾರೆ. ಇಂದು ಧಾನ್ಯಲಕ್ಷಿ÷್ಮಯನ್ನು ಕೂಡಾ ಪೂಜಿಸುತ್ತಾರೆ. ಮನೆಗಳ ಮುಂದೆ ವರ್ಣರಂಜಿತ "ಕೋಲಂ" ಎಂದರೆ ರಂಗೋಲಿಯನ್ನು ರಚಿಸಿ, ಸಂಭ್ರಮಿಸುತ್ತಾರೆ. ಪಂಜಾಬ್‌ನಲ್ಲಿ ಇದನ್ನು
ಲೋಹರಿ” ಎಂಬ ಹೆಸರಿನಿಂದಲೂ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗಳಲ್ಲಿ ಬಿಹು'' ಎಂಬ ಹೆಸರಿನಿಂದಲೂ, ಗುಜರಾತ್ ಮತ್ತು ರಾಜಸ್ತಾನಗಳಲ್ಲಿ
ಗಾಳಿಪಟ ಹಾರಿಸುವ ಹಬ್ಬ” ಎಂಬುದಾಗಿಯೂ, ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಮಕರ ವಿಳಕ್ಕ್'' ಉತ್ಸವವಾಗಿಯೂ, ಕರ್ನಾಟಕ, ಬಿಹಾರ, ಆಂಧ್ರ ಪ್ರದೇಶ ಮೊದಲಾದೆಡೆ
ಮಕರ ಸಂಕ್ರಾಂತಿ” ಎಂಬುದಾಗಿಯೇ ಆಚರಿಸುತ್ತಾರೆ.
ತಮ್ಮ ಹೊಸ ಬೆಳೆಯಾದ ಭತ್ತ, ಕಬ್ಬು, ಎಳ್ಳು ಇತ್ಯಾದಿಗಳನ್ನು ಹೊಲಗಳಿಂದ ಮನೆಗೆ ತಂದು ಅವುಗಳನ್ನು ದಾನ ಮಾಡಿದ ನಂತರ ಸೇವಿಸುವ ಪದ್ಧತಿಯು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಕಂಡು ಬರುವುದು “ಎಳ್ಳು”. ಮನೆಯಲ್ಲಿ ಎಳ್ಳುಂಡೆಗಳನ್ನು ತಯಾರಿಸಿ ಸುತ್ತಮುತ್ತಲಿನ ಮನೆಗಳಿಗೆ ಹಂಚಿ ಶುಭಾಶಯಗಳನ್ನು ಕೋರುತ್ತಾರೆ. ಎಳ್ಳು-ಬೆಲ್ಲಗಳನ್ನು ಹಂಚುತ್ತಾರೆ. ಈ ಸಂಪ್ರದಾಯವನ್ನು “ಎಳ್ಳು ಬೀರುವುದು” ಎಂದು ಕರೆಯುತ್ತಾರೆ. ಸಂಕ್ರಾಂತಿಯ ಆಚರಣೆಯಲ್ಲಿ ಎಳ್ಳು ಬೆಲ್ಲದ ಸೇವನೆಯು ಆರೋಗ್ಯಕರವಾಗಿರುತ್ತದೆ.
ಮಕರ ಸಂಕ್ರಾತಿಯ ದಿನದಂದು ಪವಿತ್ರ ಸ್ಥಳಗಳಾದ ಪ್ರಯಾಗ, ಹರಿದ್ವಾರ, ಉಜ್ಜೆನಿ, ನಾಸಿಕ್ ಮೊದಲಾದೆಡೆಗಳಲ್ಲಿ ವಿಶೇಷ ಮೇಳಗಳು ನಡೆಯುತ್ತವೆ. ೧೨ ವರುಷಗಳಿಗೊಮ್ಮೆ ಆಚರಿಸಲ್ಪಡುವ ಕುಂಭ ಮೇಳವು ಇದೇ ಮಕರ ಸಂಕ್ರಾತಿಯ ದಿನದಂದು ಮೇಲಿನ ಯಾವುದಾದರೊಂದು ಕ್ಷೇತ್ರಗಳಲ್ಲಿ ನೆರವೇರುತ್ತದೆ. ಈ ವರ್ಷ ಪ್ರಯಾಗದಲ್ಲಿ ೧೪೪ ವರ್ಷಗಳಿಗೊಮ್ಮೆ ಆಚರಿಸಲ್ಪಡುವ ಮಹಾಕುಂಭಮೇಳವೇ ಆಯೋಜಿತವಾಗಿದೆ. ಹೀಗೆ ವಿವಿಧ ಕಡೆಗಳಲ್ಲಿ ವಿವಿಧ ರೀತಿಯ ಆಚರಣೆಗಳು ಇವೆ.
ಆಚರಿಸಲು ಕಾರಣ?
ಸೂರ್ಯ ದೇವನು ಧನು ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶಿಸಿದಾಗ ಅದನ್ನು ಸೂರ್ಯನ ಸಂಕ್ರಮಣ ಕಾಲ ಎಂದು ಕರೆಯಲಾಗುತ್ತದೆ. ಈ ದಿನವನ್ನೇ ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮಕರ ಸಂಕ್ರಾಂತಿಯ ದಿನದಂದು, ಗ್ರಹಗಳ ರಾಜ, ಸೂರ್ಯ ದೇವರು, ರಾಶಿಚಕ್ರದ ಧನು ರಾಶಿಯನ್ನು ತೊರೆದು ತನ್ನ ಮಗ ಶನಿಯ ರಾಶಿಗೆ ಅಂದರೆ ಮಕರ ರಾಶಿಗೆ ಬರುತ್ತಾನೆ. ಮಕರ ಸಂಕ್ರಾಂತಿಯ ಹಬ್ಬದೊಂದಿಗೆ ಸೂರ್ಯ ಮತ್ತು ಶನಿಯ ನಡುವಿನ ಸಂಬಂಧವು ಬಹಳ ಮುಖ್ಯವಾಗುತ್ತದೆ. ಈ ದಿನದಿಂದ ಕರ್ಮಗಳು ಮುಗಿದು ಇತರ ಎಲ್ಲಾ ಶುಭ ಕಾರ್ಯಗಳು ಮತ್ತೊಮ್ಮೆ ಪ್ರಾರಂಭವಾಗುತ್ತವೆ.
- – ಹರಿಕೃಷ್ಣ ಹೊಳ್ಳ, ಬ್ರಹ್ಮಾವರ