ಬಣ್ಣ… ಒಲವಿನ ಬಣ್ಣಾ…

0
13

ಪಾನಿಪುರಿಗೆ ಬಣ್ಣ ನಿಷೇಧ ಮಾಡಿದ ಮರುಕ್ಷಣದಿಂದ ಕರಿಭಾಗೀರತಿ ಮನಸ್ಸಿಗೆ ಹಚ್ಚಿಕೊಂಡು ಹಗಲು ಮತ್ತು ರಾತ್ರಿ ಜ್ವರ ಬರುತ್ತಿವೆ ಎಂದು ಲೊಂಡೆನುಮ ಊರ ತುಂಬ ಸುದ್ದಿಹಬ್ನಿಸಿದ್ದಾನೆ. ಪಾನಿಪುರಿಗೆ ಬಣ್ಣನಿಷೇಧ ಮಾಡಿದ್ದಕ್ಕೆ ಕರಿ ಭಾಗೀರತಿಗೆ ಯಾಕೆಜ್ವರ ಬರಬೇಕು ಎಂದು ಮುದಿ ಗೋವಿಂದಪ್ಪನವರಂಥ ವಿಮರ್ಶಕರು ಚರ್ಚೆ ಮಾಡಿದ್ದಾರೆ. ರಾತ್ರಿ ಕನಸಿನಲ್ಲಿಯೂ ಸಹ ಕರಿಭಾಗೀರತಿ…ಬಣ್ಣ..ಬಣ್ಣ..
ಪಾನಿಪುರಿ ಬಣ್ಣ…
ಗೋಬಿ ಬಣ್ಣ.. ಬಣ್ಣ ಬಣ್ಣ
ಎಂದು ಹಾಡುತ್ತಿದ್ದಳು. ಅವಳ ತಂದೆ ತಾಯಿ ಈಕೆಯ ಸಂಬಂಧ ತಲೆ ಕೆಡೆಸಿಕೊಂಡಿದ್ದರು. ಯಾಕೆ ಹೀಗೆ ಎಂದು ಕರಿಲಕ್ಷುಂಪತಿ ಕಡೆಗೆ ಹೋಗಿ ತಾಯತ ಕಟ್ಟಿಸಿಕೊಂಡು ಬಂದರು. ಸಜ್ಜಿ ಹೊಲದ ದುರುಗಮ್ಮನ ಗುಡಿಗೆ ಹೋಗಿ ಜಾತ್ರೆಯಲ್ಲಿ ದಿಂಡ್ರುಳ್ಕಿ ಉಳ್ಳುತ್ತೇನೆ ಎಂದು ಬೇಡಿಕೊಂಡು ಬಂದರು. ಆಕೆ ಬೇಗ ಗುಣವಾಗಲಿ ಎಂದು ಪಾನಿಪುರಿ ಭಯ್ಯಾಗಳು ದೇವರಿಗೆ ಪ್ರಾರ್ಥನೆ ಮಾಡಿದರು. ಕನ್ನಾಳ್ಮಲ್ಲ ಮತ್ತು ಸಣ್ಮಲ್ಲವ್ವ ಮದ್ರಾಮಣ್ಣನ ಕಡೆ ಹೋಗಿ ನೋಡಿ ಸಾರ್ ಕರಿಭಾಗೀರತಿ ಮನಸ್ಸಿಗೆ ಹಚ್ಚಿಕೊಂಡಿದ್ದಾಳೆ ಏನಾದರೂ ಮಾಡಿ ಸಾರ್ ಅಂದರು. ಅಯ್ಯೋ ನಮ್ ಡಾಕ್ಟರ್‌ಗೆ ಹೋಮು ಕೊಟ್ಟಿದ್ದೇನೆ ಅವರು ಫ್ರೀ ಆದಮೇಲೆ ಚೆಕ್ ಮಾಡಿಸೋಣ ಅಂದರು. ಅವರಿಗೆ ಏನೊಂದು ತಿಳಿಯದೇ ವಾಪಸ್ ಬಂದರು. ಅವತ್ತು ರಾತ್ರಿ ಕರಿಭಾಗೀರತಿ ಮತ್ತೆ ಕನವರಿಸಿದಾಗ…. ಮರುದಿನವೇ ಭಾಗಿರತಿ ತಂದೆ ತಾಯಿ ಐಡಿಯಾ ಮಾಡಿದರು. ಕೇಸರಿ… ಲವಂಗ… ಇಲಾಚಿ.. ಚಕ್ಕೆ ಮುಂತಾದವುಗಳನ್ನು ಕುಟ್ಟಿ ಪುಡಿ ಮಾಡಿದರು. ಆ ಬಣ್ಣವನ್ನು ಪಾನಿ ಪುರಿ ಭಯ್ಯಾನಿಗೆ ಕೊಟ್ಟು… ಇದೇ ಪಾನಿ ಪುರಿ ಬಣ್ಣ ಅಂತ ಹಾಕಿಕೊಡು ಎಂದು ಹೇಳಿದರು. ಭಯ್ಯಾ ಅದೇ ರೀತಿ ಮಾಡಿದ. ಆದರೆ ಭಾಗೀರತಿ ಆ ಬಣ್ಣ ತಿಂದು ಕೊಳ್… ಕೊಳ್ ಕೆಮ್ಮಿ.. ಇದು ಅಲ್ಲವೋ ಬಣ್ಣಅಲ್ಲವೋ ಎಂದು ಕಿರುಚಿದಳು. ಎಲ್ಲರೂ ಮತ್ತೆ ಸಮಾಧಾನ ಮಾಡಿ ಬೇರೆ ಬಣ್ಣದ ಪುಡಿ ಮಾಡಿದರು. ಭಯ್ಯಾ ಅದನ್ನೆ ಹಾಕಿ ಕೊಟ್ಟ. ಅನೇಕ ವರ್ಷಗಳಿಂದ ಭಯ್ಯಾನ ಜತೆ ಲಫಡಾ ಮಾಡಿಕೊಂಡಿದ್ದ ತಿಗಡೇಸಿ ಸೇಡಿಗಾಗಿ ಕಾಯುತ್ತಿದ್ದ. ಅದು ಯಾವುದಾದರೂ ಇರಲಿ ನಮಗೇನು ಎಂದು ಸೀದಾ ಪೊಲೀಸ್ ಠಾಣೆಗೆ ಹೋಗಿ ಇಂಗಿಂಗೆ ಭಯ್ಯಾ ಬಣ್ಣ ಹಾಕಿದ್ದಾನೆ ಎಂದು ಹೇಳಿದ. ಕೂಡಲೇ ಪೊಲೀಸರು ಪಾನಿಪುರಿ ಭಯ್ಯಾನನ್ನು ಹಿಡಿದುಕೊಂಡು ಹೋಗಿ ರಿಪೇರಿ ಮಾಡತೊಡಗಿದರು. ನನಗೂ ಹೀಗೆ ಮಾಡುತ್ತಾರೆ ಎಂದು ಹೆದರಿದ ಭಾಗೀರತಿ…ಯಾವುದನ ಬಣ್ಣ ಹಾಕಲಿ…ನಾನು ಮಾತ್ರ ಅದನ್ನ ತಿನ್ನಲ್ಲಪ್ಪಾ ಅನ್ನತೊಡಗಿದಳು. ಕರಿಭಾಗಿರತಿ ಅಪ್ಪನ ಕಡೆಯಿಂದ ಸುಪಾರಿ ಪಡೆದಿದ್ದ ತಿಗಡೇಸಿ ಮರೆಯಲ್ಲಿ ಮುಸಿ ಮುಸಿ ನಗುತ್ತಿದ್ದ.

Previous articleಕನ್ನಡ ಪತ್ರಿಕೋದ್ಯಮಕ್ಕೆ ಅಡಿಪಾಯ ಹಾಕಿದ `ಮಂಗಳೂರು ಸಮಾಚಾರ’
Next articleನೀಟ್ ಪೆ ಚರ್ಚಾ ಇಂದಿನ ತುರ್ತು ಅಗತ್ಯ