ಬೆಂಗಳೂರು: ಕನ್ನಡಿಗರಿಗೆ ಅಪಮಾನ ಪ್ರಕರಣ ಸಂಬಂಧ ಗಾಯಕ ಸೋನು ನಿಗಮ್ ತಮ್ಮ ಹೇಳಿಕೆ ನೀಡಲು ಪೊಲೀಸರ ಭೇಟಿಗೆ ಸಮಯ ಕೊಡದೇ ಸೋನು ನಿಗಮ್ ಸತಾಯಿಸುತ್ತಿದ್ದಾರೆ.
ಸೋನು ನಿಗಮ್ ಕನ್ನಡದ ವಿಚಾರವಾಗಿ ಹೇಳಿಕೆ ನೀಡಿದ ವಿಷಯವಾಗಿ ಸೋನು ನಿಗಮ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್ ಸೂಚಿಸಿತ್ತಲ್ಲದೆ, ತನಿಖೆಗೆ ಸಹಕರಿಸಬೇಕು ಎಂದು ಸೋನು ನಿಗಮ್ಗೆ ನಿರ್ದೇಶನ ನೀಡಿತ್ತಲ್ಲದೆ ಪೊಲೀಸರಿಗೆ ಸೋನು ಬಳಿಯೇ ತೆರಳಿ ಹೇಳಿಕೆ ದಾಖಲಿಸಿಕೊಳ್ಳಲು ಸೂಚನೆ ನೀಡಿತ್ತು. ಪೊಲೀಸರ ಸತತ ಪ್ರಯತ್ನದ ನಡುವೆಯೂ ಇದುವರೆಗೂ ಸೋನು ನಿಗಮ್ ಪೊಲೀಸರ ಸಂಪರ್ಕಕ್ಕೆ ಸಿಗಲಿಲ್ಲ. ಪೊಲೀಸರು ಕರೆ ಮಾಡಿದಾಗಲೆಲ್ಲ ಸಮಯ ಕೊಡುವುದಾಗಿ ಹೇಳುತ್ತಲೇ ಇದ್ದಾರೆ. ಆದರೆ, ಇದುವರೆಗೆ ಸಮಯವನ್ನೇ ನೀಡಿಲ್ಲ. ಇನ್ನೆರಡು ದಿನ ಕಾಯಲು ನಿರ್ಧರಿಸಿರುವ ಪೊಲೀಸರು ನಂತರ ಕೋರ್ಟ್ ಗಮನಕ್ಕೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಏಪ್ರಿಲ್ ೨೫ ಮತ್ತು ೨೬ರಂದು ಸೋನು ನಿಗಮ್ ಅವರು ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಮತ್ತು ಕನ್ನಡಿಗರ ಭಾವನೆ ಕೆರಳಿಸುವ ಹೇಳಿಕೆ ನೀಡಿದ್ದಾರೆ ಎಂದು ಮೇ ೨ರಂದು ದೂರು ನೀಡಲಾಗಿತ್ತು. ಇದನ್ನು ಆಧರಿಸಿ ಪೊಲೀಸರು ಮೇ ೩ರಂದು ಎಫ್ಐಆರ್ ದಾಖಲಿಸಿದ್ದರು. ಈ ದೂರಿನ ವಿರುದ್ಧ ಸೋನು ನಿಗಮ್ ಹೈಕೋರ್ಟ್ ಮೆಟ್ಟಿಲೇರಿದ್ದರು.