ಪಾಕಿಸ್ತಾನ ವಿರುದ್ಧ ನೂರು ದೇಶಗಳಿಗೆ ಭಾರತ ದೂರು

0
21

ನವದೆಹಲಿ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರಿಂದ ಅಮಾಯಕ ಪ್ರವಾಸಿಗರ ನರಮೇಧ ನಂತರ ಭಾರತ ಸರ್ಕಾರ ಈಗ ಭಯೋತ್ಪಾದಕರನ್ನು ಪೋಷಿಸುತ್ತಿರುವ ಪಾಕಿಸ್ತಾನ ವಿರುದ್ಧ ಕತ್ತಿಮಸೆಯುತ್ತಿದೆ. ಪಾಕಿಸ್ತಾನ ವಿರುದ್ಧ ಸಂಘರ್ಷಕ್ಕಿಳಿಯುವ ಸರ್ವಸೂಚನೆಯನ್ನೂ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈಗಾಗಲೇ ಹಲವು ಪ್ರಮುಖ ದೇಶಗಳ ನಾಯಕರನ್ನು ಸಂಪರ್ಕಿಸಿ ಪಾಕಿಸ್ತಾನ ವಿರುದ್ಧ ದಿಟ್ಟ ಹೆಜ್ಜೆ ಇಡುವ ಮುನ್ಸೂಚನೆ ನೀಡಿದ್ದಾರೆ.
ಇದೇ ವೇಳೆ ಭಾರತೀಯ ವಿದೇಶಾಂಗ ಸಚಿವಾಲಯವು ೧೦೦ ದೇಶಗಳ ರಾಜತಾಂತ್ರಿಕ ಅಧಿಕಾರಿಗಳನ್ನು ಕರೆಯಿಸಿಕೊಂಡು ಪಾಕಿಸ್ತಾನ ಸರ್ಕಾರ ಭಾರತವನ್ನು ಗುರಿಯಾಗಿರಿಸಿಕೊಂಡು ಭಯೋತ್ಪಾದಕ ಗುಂಪುಗಳಿಗೆ ಹೇಗೆ ಸಹಾಯ ಮಾಡುತ್ತಿದೆ? ಎಂಬುದರ ಕುರಿತ ಗುಪ್ತಚರ ಮಾಹಿತಿ ಆಧರಿಸಿ ದೂರನ್ನು ನೀಡಿದೆ. ಹಾಗೆಯೇ ಭಯೋತ್ಪಾದಕರು ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿರುವುದು ಹಾಗೂ ಪಾತಕಿಗಳ ಮುಖ ಗುರುತಿಸುವಿಕೆ ಸೇರಿದಂತೆ ಹಲವಾರು ದತ್ತಾಂಶಗಳನ್ನೂ ಒದಗಿಸಿದೆ. ಪ್ರಧಾನಿ ಮೋದಿ ಅವರು ಹಲವಾರು ಪ್ರಮುಖ ದೇಶಗಳ ನಾಯಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪಾಕಿಸ್ತಾನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆಯನ್ನು ವಿವರಿಸಿದ್ದಾರೆ. ಪ್ರಧಾನಿಯವರ ಈ ದೂರವಾಣಿ ಕರೆಗಳ ಉದ್ದೇಶ ಪಾಕಿಸ್ತಾನದ ದುಷ್ಟ ಚಟುವಟಿಕೆಗಳನ್ನು ದಮನಿಸುವ ಕುರಿತು ದೇಶಗಳ ಪ್ರಮುಖರಿಗೆ ಮನವರಿಕೆ ಮಾಡಿಕೊಡುವುದೇ ಹೊರತು ಪಾಕಿಸ್ತಾನ ವಿರುದ್ಧ ಯುದ್ಧಕ್ಕೆ ಸಹಾಯ ಬಯಸುವುದಾಗಿರಲಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಪತ್ರಿಕೆಯ ವರದಿಯನುಸಾರ ಭಾರತದ ಈ ರಾಜತಾಂತ್ರಿಕ ಕ್ರಮಗಳು ನೆರೆಯ ಪಾಕಿಸ್ತಾನ ದೇಶದ ವಿರುದ್ಧ ಮಿಲಿಟರಿ ಕ್ರಮಗಳನ್ನು ಕೈಗೊಳ್ಳಲು ಪ್ರಕರಣ ಸಿದ್ಧಪಡಿಸುವ ಪ್ರಯತ್ನದಂತಿದೆ. ಈಚೆಗೆ ಪ್ರಧಾನಿ ಮೋದಿಯವರು ಬಿಹಾರದ ಮಧುಬನಿಯಲ್ಲಿ ಭಾಷಣ ಮಾಡುವಾಗ ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಗುರುಗಳಿಗೆ ಎಚ್ಚರಿಕೆ ನೀಡುವುದರ ಜೊತೆಗೆ ಪಾಕಿಸ್ತಾನದ ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಕುರಿತು ಜಗತ್ತಿಗೆ ಇಂಗ್ಲಿಷ್‌ನಲ್ಲಿ ಹೇಳುವ ಮೂಲಕ ಕಠಿಣ ಸಂದೇಶ ರವಾನಿಸಿದ್ದಾರೆ.
ಆದರೆ ಉಭಯದೇಶಗಳ ನಡುವಣ ಮಿಲಿಟರಿ ಸಂಘರ್ಷವು ಪರಮಾಣು ಶಸ್ತ್ರಗಳಿಂದ ಸಜ್ಜಿತವಾದರೆ ಯುದ್ಧ ಶೀಘ್ರವಾಗಿ ಉಲ್ಬಣಿಸುವ ಅಪಾಯವಿದೆ. ಇದನ್ನು ತಡೆಯುವುದು ಬಹಳ ಕಷ್ಟವಾಗಬಹುದು. ಇತ್ತೀಚಿನ ವರ್ಷಗಳಲ್ಲಿ ಭಾರತ ರಾಜತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಬಲಾಢ್ಯವಾಗುತ್ತಿರುವುದರಿಂದ ತನ್ನ ಆಕ್ರೋಶ ಹೊರಹಾಕಲು ಹಿಂದೇಟು ಹಾಕುತ್ತಿಲ್ಲ.
ಈಗಾಗಲೇ ಸೌದಿ ಅರೇಬಿಯಾ ಹಾಗೂ ಇರಾನ್ ದೇಶಗಳು ಉಭಯತ್ರರರ ಜೊತೆಗೂ ಮಾತನಾಡಿ ಮಧ್ಯಸ್ಥಿಕೆಗೆ ಮುಂದಾಗಿವೆ. ಆದರೆ ವಿಶ್ವಸಂಸ್ಥೆ ಹಾಗೂ ಐರೋಪ್ಯ ಸಮುದಾಯವು ಸಂಯಮ ಹಾಗೂ ಮಾತುಕತೆ ಮೂಲಕ ಸಂಘರ್ಷ ತಪ್ಪಿಸಬೇಕೆಂದು ಒತ್ತಾಯಿಸುತ್ತಿವೆ.

Previous articleಮತ್ತೆ 64,000 ಕೋಟಿಗೆ ರಫೇಲ್ ವಿಮಾನ ಖರೀದಿ
Next articleಐರೋಪ್ಯ ರಾಷ್ಟ್ರಗಳಲ್ಲಿ ವಿದ್ಯುತ್ ಇಲ್ಲದೆ ಪರದಾಟ