ಹೈದರಾಬಾದ್: ಮಾಜಿ ಸೈನಿಕನೊಬ್ಬ ಕೋಪದ ಭರದಲ್ಲಿ ಪತ್ನಿಯನ್ನು ಕೊಂದು, ಆಕೆಯ ದೇಹದ ಭಾಗಗಳನ್ನು ಕತ್ತರಿಸಿ ವಿಲೇವಾರಿ ಮಾಡುವಾಗ ಸಿಕ್ಕಿಬಿದ್ದಿದ್ದಿದ್ದಾನೆ. ವಿಲೇವಾರಿಗೂ ಮುನ್ನ ಪ್ರೆಷರ್ ಕುಕ್ಕರ್‌ನಲ್ಲಿ ದೇಹದ ಭಾಗಗಳನ್ನು ಬೇಯಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ರಂಗಾರೆಡ್ಡಿ ಜಿಲ್ಲೆಯ ಮೀರ್‌ಪೇಟ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟೇಶ್ವರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಹತ್ಯೆಗೈದ ಮಾಜಿ ಸೈನಿಕ ಗುರುಮೂರ್ತಿ, ಪ್ರಸ್ತುತ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆ. ತನ್ನ ಹೆಂಡತಿ ಪುಟ್ಟ ವೆಂಕಟ ಮಾಧವಿ ಜೊತೆ ಜಗಳವಾಡಿದ ನಂತರ ಸಿಟ್ಟಿನ ಭರದಲ್ಲಿ ಕೊಂದಿರುವುದಾಗಿ ತಪ್ಪೊಪ್ಪಿ ಕೊಂಡಿದ್ದಾನೆ. ತಮ್ಮ ಮಗಳು ಕಾಣೆಯಾಗಿರುವುದಾಗಿ ಪುಟ್ಟ ವೆಂಕಟ ಮಾಧವಿ ಅವರ ತಾಯಿ ಜನವರಿ ೧೮ರಂದು ಪೊಲೀಸರಿಗೆ ದೂರು ನೀಡಿದ್ದರು. ಜನವರಿ ೧೬ರಂದು ಗಂಡನ ಜೊತೆ ಜಗಳವಾಡಿಕೊಂಡು ಹೊರ ಹೋದವಳು ಬಂದಿಲ್ಲ ಎಂದಿದ್ದರು. ಆದರೆ ತನಿಖೆ ಸಂದರ್ಭದಲ್ಲಿ ಆಕೆಯ ಹತ್ಯೆ ನಡೆದಿರುವುದು ಬಯಲಿಗೆ ಬಂದಿದೆ. ದೇಹದ ಭಾಗಗಳನ್ನು ಸ್ಥಳೀಯ ಕೆರೆಗೆ ಎಸೆದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಮೂಳೆಯನ್ನೂ ಕುಟ್ಟಿ ಪುಡಿ ಮಾಡಿದ್ದ ದುರುಳ
ಕೊಲೆ ಮುಚ್ಚಿಡಲು ಮತ್ತು ಸಾಕ್ಷ್ಯವನ್ನು ನಾಶಮಾಡಲು, ಹೆಂಡತಿಯ ದೇಹವನ್ನು ತುಂಡರಿಸಿದ್ದಾನೆ. ಮೂಳೆಗಳಿಂದ ಮಾಂಸವನ್ನು ಬೇರ್ಪಡಿಸಿದ್ದಾನೆ. ಮಾಂಸ ಮತ್ತು ಮೂಳೆಯನ್ನು ಕುಕ್ಕರ್‌ನಲ್ಲಿ ಹಾಕಿ ಮೂರು ದಿನಗಳ ಕಾಲ ಕುದಿಸಿದ್ದಾನೆ. ಮೂಳೆಗಳನ್ನು ಕುಟ್ಟಿ ಪುಡಿ ಮಾಡಿದ್ದಾನೆ. ನಂತರ ಕೆರೆಗೆ ಹಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.