RSS: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅಂದ್ರೆ ಸಾಕು, ಅಲ್ಲಿ ಸಾವಿರ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ವಿಶ್ವದ ಅತಿದೊಡ್ಡ ಸಂಘಟನೆಯಾಗಿ ಬೆಳೆದು ನಿಂತಿರುವ ಆರ್‌ಎಸ್‌ಎಸ್‌ಗೆ ಫಂಡಿಂಗ್ ಎಲ್ಲಿಂದ ಬರುತ್ತೆ? ನೋಂದಣಿ ಇಲ್ಲದಿದ್ದರೂ ಇಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ? ಎಂಬಿತ್ಯಾದಿ ಚರ್ಚೆಗಳು ಆಗಾಗ ಮುನ್ನೆಲೆಗೆ ಬರುತ್ತವೆ.
ಇತ್ತೀಚೆಗೆ ಕರ್ನಾಟಕದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸಂಘದ ಆದಾಯ ತೆರಿಗೆ ಮತ್ತು ನೋಂದಣಿ ಬಗ್ಗೆ ಪ್ರಶ್ನೆ ಎತ್ತಿದ್ದು ಭಾರೀ ಸಂಚಲನ ಮೂಡಿಸಿತ್ತು. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಸ್ವತಃ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಯೋಧ್ಯೆಯ ರಾಮಮಂದಿರದ ಆವರಣದಲ್ಲೇ ಸ್ಪಷ್ಟ ಉತ್ತರ ನೀಡಿದ್ದಾರೆ.
ವಿದೇಶಿಗರಿಗೂ ಇದೇ ಡೌಟು!: ಅಯೋಧ್ಯೆಯಲ್ಲಿ ರಾಮಧ್ವಜ ಆರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಬಗ್ಗೆ ಜಗತ್ತಿನಾದ್ಯಂತ ಎಂತಹ ಕುತೂಹಲವಿದೆ ಎಂಬುದನ್ನು ತೆರೆದಿಟ್ಟರು.
“ನನ್ನನ್ನು ಭೇಟಿಯಾಗಲು ಬರುವ ಹಲವು ದೇಶಗಳ ರಾಯಭಾರಿಗಳು ಹಾಗೂ ಹೈಕಮಿಷನರ್‌ಗಳು, ‘ನೀವು ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರೇ?’ ಎಂದು ಕೇಳುತ್ತಾರೆ. ಅಷ್ಟೇ ಅಲ್ಲ, ಇಷ್ಟು ದೊಡ್ಡ ಸಂಘಟನೆಗೆ ಹಣಕಾಸಿನ ನೆರವು ಎಲ್ಲಿಂದ ಸಿಗುತ್ತದೆ ಎಂದು ಅಚ್ಚರಿಪಡುತ್ತಾರೆ” ಎಂದು ಯೋಗಿ ಹೇಳಿದರು.
ಒಪೆಕ್ ಅಥವಾ ಚರ್ಚ್ ಹಣವಲ್ಲ: ಸಂಘದ ಆರ್ಥಿಕ ಮೂಲದ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆದ ಯೋಗಿ, “ನಾನು ವಿದೇಶಿ ಗಣ್ಯರಿಗೆ ಸ್ಪಷ್ಟವಾಗಿ ಹೇಳಿದ್ದೇನೆ, ಆರ್‌ಎಸ್‌ಎಸ್‌ಗೆ ಪೆಟ್ರೋಲಿಯಂ ರಫ್ತು ಮಾಡುವ ಶ್ರೀಮಂತ ‘ಒಪೆಕ್’ (OPEC) ರಾಷ್ಟ್ರಗಳಿಂದಾಗಲಿ ಅಥವಾ ಅಂತಾರಾಷ್ಟ್ರೀಯ ಚರ್ಚ್‌ಗಳಿಂದಾಗಲಿ ನಯಾಪೈಸೆ ಫಂಡಿಂಗ್ ಬರುವುದಿಲ್ಲ. ಇದು ಕೇವಲ ಹಣದಿಂದ ನಡೆಯುವ ಸಂಘಟನೆಯಲ್ಲ” ಎಂದು ಖಡಕ್ ಆಗಿ ಸ್ಪಷ್ಟಪಡಿಸಿದ್ದಾರೆ.
ಹಾಗಾದರೆ ಹಣ ಬರೋದು ಎಲ್ಲಿಂದ?: ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಮತ್ತು ಪ್ರಧಾನಿ ಮೋದಿ ಅವರ ಸಮ್ಮುಖದಲ್ಲೇ ಯೋಗಿ ಆದಿತ್ಯನಾಥ್ ಸಂಘದ ಶಕ್ತಿಯ ಮೂಲವನ್ನು ವಿವರಿಸಿದರು. “ಈ ಸಂಘಟನೆ ಬೆಳೆದಿರುವುದು ಸಮಾಜದ ಸಹಯೋಗದಿಂದ. ಸ್ವಯಂಸೇವಕರು ನೀಡುವ ತನು-ಮನ-ಧನವೇ ಇದರ ಬಂಡವಾಳ. ಯಾವುದೇ ಜಾತಿ, ಭಾಷೆ ಅಥವಾ ಧರ್ಮದ ಹಂಗಿಲ್ಲದೆ, ಕಷ್ಟಕಾಲದಲ್ಲಿ ಸಮಾಜಕ್ಕೆ ಸ್ಪಂದಿಸುವ ಸ್ವಯಂಸೇವಕರ ಸಮರ್ಪಣಾ ಭಾವವೇ ಸಂಘಕ್ಕೆ ಹರಿದು ಬರುವ ನಿಜವಾದ ಸಂಪತ್ತು” ಎಂದು ವಿವರಿಸಿದರು.
ಏನಿದು ‘ಗುರುದಕ್ಷಿಣೆ’ ವ್ಯವಸ್ಥೆ?: ಯೋಗಿ ಆದಿತ್ಯನಾಥ್ ಹೇಳಿದ ‘ಸಮಾಜದ ಸಹಯೋಗ’ದ ಹಿಂದೆ ಆರ್‌ಎಸ್‌ಎಸ್‌ನ ವಿಶಿಷ್ಟವಾದ ‘ಗುರುದಕ್ಷಿಣೆ’ ಪದ್ಧತಿಯಿದೆ. ಆರ್‌ಎಸ್‌ಎಸ್ ತನ್ನ ಕಾರ್ಯಚಟುವಟಿಕೆಗಳಿಗೆ ಸರ್ಕಾರದ ಅನುದಾನವನ್ನಾಗಲಿ ಅಥವಾ ಕಾರ್ಪೊರೇಟ್ ದೇಣಿಗೆಯನ್ನಾಗಲಿ ನೆಚ್ಚಿಕೊಂಡಿಲ್ಲ.
ಬದಲಾಗಿ, ವರ್ಷಕ್ಕೊಮ್ಮೆ ನಡೆಯುವ ‘ಗುರು ಪೂರ್ಣಿಮೆ’ ಉತ್ಸವದಲ್ಲಿ ಲಕ್ಷಾಂತರ ಸ್ವಯಂಸೇವಕರು ಭಗವಾ ಧ್ವಜದ ಮುಂದೆ ತಮಗೆ ಸಾಧ್ಯವಾದಷ್ಟು ಹಣವನ್ನು ಸಮರ್ಪಿಸುತ್ತಾರೆ. ‘ಇದು ನನ್ನದಲ್ಲ, ಎಲ್ಲಾ ಸಮಾಜದ್ದು’ ಎಂಬ ಧ್ಯೇಯದೊಂದಿಗೆ ಸ್ವಯಂಸೇವಕರು ನೀಡುವ ಈ ಹಣವೇ ವರ್ಷವಿಡೀ ಸಂಘದ ಸೇವಾ ಕಾರ್ಯಗಳಿಗೆ ಬಳಕೆಯಾಗುತ್ತದೆ. ಹೀಗಾಗಿ ಸಂಘಕ್ಕೆ ಹೊರಗಿನ ಫಂಡಿಂಗ್ ಅವಶ್ಯಕತೆಯೇ ಬರುವುದಿಲ್ಲ ಎಂಬುದು ಸಂಘದ ಹಿರಿಯರ ಅಭಿಪ್ರಾಯವಾಗಿದೆ.
ಆರ್‌ಎಸ್‌ಎಸ್ ಶತಮಾನೋತ್ಸವದ ಹೊಸ್ತಿಲಲ್ಲಿರುವಾಗ, ಅಯೋಧ್ಯೆಯ ಪವಿತ್ರ ನೆಲದಿಂದ ಹರಿದು ಬಂದ ಈ ಸ್ಪಷ್ಟನೆ, ಸಂಘದ ಆರ್ಥಿಕ ಮೂಲದ ಬಗ್ಗೆ ಇದ್ದ ಹಲವು ಅನುಮಾನಗಳಿಗೆ ತೆರೆ ಎಳೆದಂತಾಗಿದೆ.
